Monday, August 10, 2020

Stories for kids - 13 - Gautama Buddha's story

ಗೌತಮ ಬುಧ್ದನ ಕಥೆ 

೨೬೦೦ ವರ್ಷಗಳ ಹಿಂದೆ ಕಪಿಲವಸ್ತು ಅನ್ನುವ ರಾಜ್ಯ ಇತ್ತು. ಕಪಿಲವಸ್ತು ಇಂದಿನ ಉತ್ತರ ಪ್ರದೇಶದಲ್ಲಿ ಇತ್ತು. ಕಪಿಲವಸ್ತುವಿನ ರಾಜ ಶುದ್ಧೋದನ. ಅವನ ಹೆಂಡತಿಯ ಹೆಸರುಮಹಾಮಾಯ. 

ಒಂದು ದಿನ ಮಹಾಮಾಯೆಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಅವಳಿಗೆ ೬ ದಂತಗಳಿರುವ ಒಂದು ಬಿಳಿಯ ಆನೆ ಕಾಣಿಸಿಕೊಂಡಿತು. ಮರು ದಿನ ಬೆಳಿಗ್ಗೆ ಆಸ್ಥಾನದ ಜ್ಯೋತಿಷಿಯನ್ನು ಕೇಳಿದರು. ಆ ಕನಸಿನ ಅರ್ಥ ಏನು ಅಂತ. ಆಗ ಜ್ಯೋತಿಷಿ ಹೇಳಿದನು ' ರಾಣಿಗೆ ಒಂದು ಗಂಡು ಮಗು ಜನಿಸಲಿದೆ ಅಂತ ಈ ಕನಸಿನ ಅರ್ಥ.' ಸ್ವಲ್ಪ ದಿನಗಳಾದಮೇಲೆ ಮಹಾಮಾಯೆ ಗರ್ಭವತಿ ಆದಳು. 

ಗರ್ಭದಲ್ಲಿ ಮಗು ಇದ್ದಾಗ ಅವಳು ಒಮ್ಮೆ ಅವಳ ತಾಯಿಯ ಮನೆಯ ಕಡೆ ಹೊರಟಳು. ದಾರಿಯಲ್ಲಿ ಲೂಮ್ಬಿನಿ ಎನ್ನುವ ಜಾಗದಲ್ಲಿ ವಿಶ್ರಮ ತಗೊಳಲು ನಿಂತಳು. ಅವಳಿಗೆ ಅಲ್ಲಿಯೇ   ನೋವ್ವು ಬಂದು ಮಗುವು ಜನಿಸಿತು. ಅವನೇ ಸಿದ್ಧಾರ್ಥ. 

ಮಗನ ಜನ್ಮದಿಂದ ತುಂಬಾ ಸಂತೋಷ ಆಯಿತು ರಾಜ ರಾಣಿ ಇಬ್ಬರಿಗೂ. ಏನಿರಬಹುದು ಮಗನ ಭವಿಷ್ಯ ಎಂದು ಕುತೂಹಲದಿಂದ ಮತ್ತೆ ಅರಮನೆಯ ಜ್ಯೋತಿಷಿಯನ್ನು ಕರೆಸಿದನು. ಕರೆದು ತನ್ನ ಮಗನ ಭವಿಷ್ಯದಲ್ಲಿ  ಏನಿರಬಹುದು ಎಂದು ಕೇಳಿದನು. ಜ್ಯೋತಿಷಿ ಮಗುವಿನ ಜಾತಕ ಪರಿಶೀಲಿಸಿ ಹೇಳಿದನು - 'ಇವನು ತುಂಬಾ ದೊಡ್ಡ ವ್ಯಕ್ತಿ ಆಗುವನು. ಇತಿಹಾಸದಲ್ಲಿ ಇವನ ಹೆಸರು ಯಾರು ಮರೆಯುವುದಿಲ್ಲ. ಇವನು ಚಕ್ರವರ್ತಿ ಆಗಬಹುದು.  ಚಕ್ರವರ್ತಿ ಆದರೆ ಇವನ ರಾಜ್ಯಕ್ಕೆ ಕೊನೆಯೇ ಇಲ್ಲ ಅನ್ನುವಷ್ಟು ದೊಡ್ಡದಾಗಿರುತ್ತದೆ.  ಇಲ್ಲ ಅಂದರೆ ಇವನು ಒಬ್ಬ ಸಾಧು ಕೂಡ ಆಗಬಹುದು. '

ಈ ಮಾತನ್ನು ಕೇಳಿದ ಶುದ್ಧೋದನ ತನ್ನ ಮಗ ಚಕ್ರವರ್ತಿಯೇ ಆಗಬೇಕೆಂದು ಗರ್ಜಿಸಿದನು. ಕೇವಲ ಒಬ್ಬ ಸಾಧು ಆಗುವುದು ಅವನಿಗೆ ಇಷ್ಟ ಇರಲಿಲ್ಲ. 

ಅಂದಿನಿಂದ ಶುದ್ಧೋಧನ ಸಿದ್ಧಾರ್ಥನಿಗೆ ಜೀವನದ ಯಾವುದೇ ಕಷ್ಟಗಳನ್ನು ಅರಿಯಲು ಬಿಡಲಿಲ್ಲ. ಏನಪ್ಪಾ ಇದರ ಅರ್ಥ ಅಂದರೆ ಸಿದ್ಧಾರ್ಥನು ದೊಡ್ಡವನಾಗಿ ಬೆಳೆದು ಮದುವೆ ಆದರೂ ಒಂದು ಸಾರಿಯೂ ಒಬ್ಬ ರೋಗಿಯನ್ನು ನೋಡಿರಲಿಲ್ಲ. ಒಬ್ಬ ವೃದ್ಧನನ್ನು ನೋಡಿರಲಿಲ್ಲ. ಹೀಗಾಗಿ ಅವನಿಗೆ ಜೀವನದಲ್ಲಿ ಕಷ್ಟಗಳಿರುತ್ತದೆ ಅನ್ನುವುದೇ ಗೊತ್ತಿರಲಿಲ್ಲ. ಅವನು ಒಂದೂ ಕಷ್ಟ ನೋಡದೆ ಇದ್ದರೆ ಯಾಕೆ ಸಾಧು ಆಗುತ್ತಾನೆ ಎಂದು ಶುದ್ಧೋಧನನ ಯೋಚನೆ. 

ಸಿದ್ಧಾರ್ಥನ ಸಾರಥಿಯ ಹೆಸರು ಚನ್ನ ಅಂತ. ಒಮ್ಮೆ ಶುದ್ಧೋದನಿಗೆ ಗೊತ್ತಿಲ್ಲದೆ ಸಿದ್ಧಾರ್ಥನು ನಗರದ ಪ್ರವಾಸ ಮಾಡಲು ಚನ್ನನ ಜೊತೆ ಹೊರಟನು. ದಾರಿಯಲ್ಲಿ ಒಬ್ಬ ಭಿಕ್ಷುಕನನ್ನು ನೋಡಿದನು. ಎಂದೂ ಭಿಕ್ಷುಕನನ್ನು ನೋಡದ ಸಿದ್ಧಾರ್ಥ ಆಶ್ಚರ್ಯಗೊಂಡನು. 'ಚನ್ನ, ಅದು  ಯಾರು? ಯಾಕೆ ಇಂಥ ಹೊಲಸು ಬಟ್ಟೆ ಹಾಕಿದ್ದಾನೆ. ಯಾಕೆ ಇಷ್ಟು ಆಯಾಸಗೊಂಡಂತೆ ಕಾಣುತ್ತಾನೆ?'

ಚನ್ನ ಹೇಳಿದನು - 'ಸ್ವಾಮಿ, ಅವನು ಒಬ್ಬ ಭಿಕ್ಷುಕ. ಅವನ ಹತ್ತಿರ ದುಡ್ಡಿಲ್ಲ, ಮನೆ ಇಲ್ಲ, ಒಳ್ಳೆ ಬಟ್ಟೆ ಇಲ್ಲ. ಅದಕ್ಕೆ ಹಾಗಿದ್ದಾನೆ.'

ಸಿದ್ಧಾರ್ಥನಿಗೆ ಆಶ್ಚರ್ಯ ಆಯಿತು. ಮುಂದೆ ಹೋದರೆ ಒಬ್ಬ ರೋಗಿಯನ್ನು ನೋಡಿದನು. 'ಚನ್ನ, ಅದು ಯಾರು? ಯಾಕೆ ಅವನು ಅಷ್ಟೊಂದು ಕೆಮ್ಮುತ್ತಿದ್ದಾನೆ? ನೋಡಲು ತುಂಬಾ ನಿಸಶಕ್ತಿಯಿಂದಿದ್ದಾನೆ. ಏನಾಯಿತು ಅವನಿಗೆ?' 

ಚನ್ನ ಹೇಳಿದನು - 'ಸ್ವಾಮಿ, ಅವನು ಒಬ್ಬ ರೋಗಿ, ಅವನಿಗೆ ಏನೋ ರೋಗ ಬಂದಿದೆ. ಕೆಲವು ರೋಗಗಳಿಗೆ ಔಷದಿ ಉಂಟು ಆದರೆ ಕೆಲವು ರೋಗಗಳಿಗೆ ಇಲ್ಲ. '

ಸಿದ್ಧಾರ್ಥನಿಗೆ ಇನ್ನು ಆಶ್ಚರ್ಯ ಆಯಿತು. ಮುಂದೆ ಹೋದರೆ ಒಬ್ಬ ತುಂಬಾ ವಯಸಾದವನು ಕಾಣಿಸಿದನು. ಅವನ ಮೇಯೆಲ್ಲ ಬಗ್ಗಿಹೋಗಿತ್ತು. ಬಿಳಿಕೂದಲು. ಸರಿಯಾಗಿ ನಿಲ್ಲಲ್ಲೂ ಆಗದೆ ಕೋಲಿನ ಸಹಾಯದಿಂದ ನಿಂತಿದ್ದನು. . 'ಚನ್ನ, ಅದು ಯಾರು? ಯಾಕೆ ಅವನು ಅಷ್ಟೊಂದು ಬಗ್ಗಿದ್ದಾನೆ ? ಯಾಕೆ ಕೋಲು ಹಿಡಿದಿರುವುದು ಅವನು?' 

ಚನ್ನ ಹೇಳಿದನು - 'ಸ್ವಾಮಿ, ಅವನಿಗೆ ವಯಸ್ಸಾಗಿದೆ ಸ್ವಾಮಿ. ವಯಸ್ಸಾದಮೇಲೆ ಎಲ್ಲರಿಗು ಶಕ್ತಿ ಕಮ್ಮಿ ಆಗುವುದು ಕೂದಲು ಬೆಳ್ಳಗಾಗುವುದು ಸಹಜ.'

'ನನಗೂ ವಯಸ್ಸಾಗತ್ತ, ಚನ್ನ?' ಎಂದು ಕೇಳಿದನು ಸಿದ್ಧಾರ್ಥ. 

'ಹೌದು ಸ್ವಾಮಿ'

ಮತ್ತೆ ಒಂದು ಚೂರು ಮುಂದೆ ಹೋದರೆ ನಾಲ್ಕು ಜನ ಒಂದು ಶವವನ್ನು ಎತ್ತಿಕೊಂಡು ಹೋಗುತ್ತಿದ್ದರು. ಸಿದ್ಧಾರ್ಥ ಕೇಳಿದನು 'ಚನ್ನ, ಅದು ಯಾಕೆ ಅವನನ್ನು ಹಾಗೆ ಎತ್ತಿಕೊಂಡು ಹೋಗುತ್ತಿದ್ದಾರೆ? ಏನಾಯಿತು ಅವನಿಗೆ?' 

ಚನ್ನ ಹೇಳಿದನು 'ಸ್ವಾಮಿ, ಆ ಮನುಷ್ಯನ ಜೀವ ಹೊರಟು ಹೋಗಿದೆ.  ಅವನು ಸತ್ತು ಹೋಗಿದ್ದಾನೆ ಸ್ವಾಮಿ '

'ನಾನೂ ಸಾಯುತ್ತೀನಾ, ಚನ್ನ?' ಸಿದ್ಧಾರ್ಥ ಎಂದು ಕೇಳಿದ. 

'ಹೌದು ಸ್ವಾಮಿ'

ಇದನ್ನು ಕೇಳಿದ ಬುದ್ಧನ ಮನಸಲ್ಲಿ ವೈರಾಗ್ಯ ಹುಟ್ಟಿತು. ಇಷ್ಟೊಂದು ಕಷ್ಟಗಳು ಜನ ಅನುಭವಿಸುತ್ತಿರುವಾಗ ಅವನು ಮಾತ್ರ ಹೇಗೆ ಸುಖವಾಗಿ ಅರಮನೆಯಲ್ಲಿ ಇರಬಹುದು? ಈ ಕಷ್ಟಗಳಿಂದ ಹೊರಗೆ ಬರುವ ಮಾರ್ಗ ಇಲ್ಲವೇ? ತನ್ನ ಈ ಪ್ರಶ್ನೆಯ ಉತ್ತರಕ್ಕಾಗಿ ಬುದ್ಧನು ಅರಮನೆ ತ್ಯಜಿಸಿ ಒಂದು ಸನ್ಯಾಸಿ ಆದನು. 

ಸನ್ಯಾಸಿ ಆಗಿ ಒಂದು ಅರಳಿ ಮರದ ಕೆಳಗೆ ಕುಳಿತು ಜೀವನದ ಸಮಸ್ತ ಕಷ್ಟಗಳ ಮೇಲೆ ವಿಚಾರ ಮಾಡುತ್ತಾ ಧ್ಯಾನ ಮಾಡಿದನು. ಹಲವಾರು ವರ್ಷಗಳ ಸಾಧನೆಯ ನಂತರ ಅವನಿಗೆ ಜ್ಞಾನೋದಯವಾಗಿ ನಿರ್ವಾನಾ ಹೊಂದಿದನು. ಅವನು ಸಿದ್ಧಾರ್ಥನಿಂದ ಗೌತಮ ಬುದ್ಧನಾದನು. 

ಎಷ್ಟೇ ಮಗನನ್ನು ಚಕ್ರವರ್ತಿ ಆಗಿಸಬೇಕೆಂದು ಪ್ರಯತ್ನಪಟ್ಟರು ಸಿದ್ಧಾರ್ಥನು ಸನ್ಯಾಸಿಯೇ ಆದನು. ಮಾನವರು ಎಂದೂ ಗೌರವಿಸುವಂಥ ಗುರುವಾದನು. 

Wednesday, July 15, 2020

Stories for kids - 12 - Devanampriya Ashoka

ದೇವನಂಪ್ರಿಯ ಅಶೋಕ 

೨೨೦೦ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಒಬ್ಬ ರಾಜನಿದ್ದನು. ಅವನ ಹೆಸರು ಅಶೋಕ. ಅವನ ರಾಜ್ಯ ಅತಿ ದೊಡ್ಡದು. ದಕ್ಷಿಣದಲ್ಲಿ ಕರ್ನಾಟಕದಿಂದ  ಉತ್ತರದಲ್ಲಿ ಇಂದಿನ ಅಫ್ಘಾನಿಸ್ತಾನದ ವರಿಗು. 

ಆದರೆ ಕಳಿಂಗ  ಎನ್ನುವ ಒಂದು ಸಣ್ಣ ರಾಜ್ಯ ಅವನದಾಗಿರಲಿಲ್ಲ. ಕಳಿಂಗ ಅಂದರೆ ಇಂದಿನ ಒಡಿಶಾ ಎನ್ನಬಹುದು. ಅಶೋಕ ತುಂಬಾ ಕ್ರೂರಿಯಾಗಿದ್ದನು. ಏನಾದರೂ ಮಾಡಿ ಈ ಕಳಿಂಗ ರಾಜ್ಯವನ್ನು ತನ್ನದಾಗಿಸಬೇಕೆಂದು ಅವನು ಅದರಮೇಲೆ ಯುದ್ಧಕ್ಕೆ ಹೋದನು. ಒಂದು ಘೋರ ಯುದ್ಧ ನಡಿಯಿತು. ಕೊನೆಗೂ ಅಶೋಕನು ಕಳಿಂಗ ರಾಜ್ಯವನ್ನು ಗೆದ್ದನು. 

ಆದರೆ, ಯುದ್ಧದಲ್ಲಿ ೧೦೦,೦೦೦ ಜನ ಸಾವಿಗೆ ಒಳಗಾದರು. ಎಲ್ಲಿ ನೋಡಿದರೆ ಅಲ್ಲಿ ಶವಗಳು ಕಾಣುತಿತ್ತು. ಇದನ್ನು ನೋಡಿದ ಅಶೋಕನ ಕಲ್ಲಿನ ಹೃದಯ ಕರಗಿತು. ಯುದ್ಧ ಮಾಡಿದಕ್ಕೆ ತುಂಬಾ ಪಶ್ಚಾತಾಪ ಪಟ್ಟನು. ಅವನು ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಬುದ್ಧನ ಶಾಂತಿಯ ಮಾರ್ಗವನ್ನು ಅನುಸರಿಸಿದನು. ಅಂದಿನಿಂದ ಯುದ್ಧ ಮಾಡಬಾರದೆಂದು ನಿಶ್ಚಯಿಸಿದನು. ಕಳಿಂಗ ಯುದ್ಧವೇ ಅವನ ಜೀವನದ ಕೊನೆಯ ಯುದ್ಧ.  

ರಾಜರೆಂದರೆ ಹೇಗೆ ಅಂದರೆ ಒಂದು ಯುದ್ಧ ಗೆದ್ದಮೇಲೆ ತಮ್ಮ ರಾಜ್ಯ ಇನ್ನು ವಿಸ್ತರಿಸಲು ಇನ್ನಷ್ಟು ಯುದ್ಧ ಮಾಡುತಿದ್ದರು. ಇದು ಬರಿ ನಮ್ಮ ದೇಶದ ರಾಜರಲ್ಲ, ಬೇರೆ ದೇಶಗಳ ರಾಜರು ಹೀಗೇ. ಇದು ವರಿಗೂ ಅದೆಷ್ಟು ನೂರು ಸಾವಿರ ರಾಜರು ಜಗತ್ತಿನಲ್ಲಿ  ಆಳಿದ್ದಾರೆಯೋ ಅವರೆಲ್ಲರಲ್ಲಿ ಅಶೋಕ ಒಬ್ಬನೇ ಗೆದ್ದ ನಂತರ ಯುದ್ಧ ನಿಲ್ಲಿಸಿ ಶಾಂತಿಯ ಮಾರ್ಗ ಹಿಡಿದಿದ್ದು. ಇದು ಸಾಮಾನ್ಯ ವಿಷಯವಲ್ಲ. ಅದಕ್ಕೆ ಅಶೋಕನನ್ನು ತುಂಬಾ ಸಾಹಿತಿಗಳು ಸರ್ವಶ್ರೇಷ್ಠ ರಾಜನೆಂದಿದ್ದಾರೆ. 

ಅಶೋಕ ಅವನ ರಾಜ್ಯದಲ್ಲಿ ಎಲ್ಲಾ ಕಡೆ ಕಂಭಗಳನ್ನು ಸ್ಥಾಪಿಸಿದನು. ಈ ಕಂಭಗಳಲ್ಲಿ ಬುದ್ಧನ ಬೋಧನೆಗಳು ಬರೆದಿದ್ದವು. ಇಂದಿನ ಭಾರತದ ನಾಲ್ಕು ಸಿಂಹಗಳ ರಾಷ್ಟ್ರೀಯ ಚಿಹ್ನೆ ಅಶೋಕನ ಒಂದು ಕಂಭದಿಂದ ತಗೊಂಡಿರುವುದು. ಬುದ್ಧನ ಶಾಂತಿಯ ಸಂದೇಶವನ್ನು ಜನರಿಗೆ ತಲುಪಿಸುವುದೇ ಅವನ ಜೀವನದ ಕೆಲಸ ಆಯಿತು. ದಾರಿಗಳಲ್ಲಿಎರಡೂ ಕಡೆ ಮರ ನೆಡಿಸಿದನು. ಯಾತ್ರಿಗಳಿಗೆ ಇದರಿಂದ ತುಂಬಾ ಅನುಕೂಲ ಆಗುತಿತ್ತು. ಮಾಂಸಾಹಾರ ಬಿಟ್ಟನು. ಅರಮನೆಯ ಪಾಕಶಾಲೆಯಲ್ಲಿ ಅದನ್ನು ನಿಷೇಧಿಸಿದನು. ತನ್ನ ಮಕ್ಕಳಾದ ಸಂಘಮಿತ್ರ  ಹಾಗೂ ಮಹೇಂದ್ರರನ್ನು ಶ್ರೀ ಲಂಕೆಗೆ ಕಳಿಸಿದನು. ಅಲ್ಲಿ ಅವರು ಬುದ್ಧನ ಶಾಂತಿ ದೂತರಾಗಿ ಹೋದರು. ಇಂದಿಗೂ ಶ್ರೀ ಲಂಕೆಯಲ್ಲಿ ತುಂಬಾ ಜನ ಬೌದ್ಧರಿದ್ದಾರೆ. ಒಂದು ಕುತೂಹಲದ ವಿಷಯ ಏನೆಂದರೆ ಬುದ್ಧ ಧ್ಯಾನ ಮಾಡುತಿದ್ದ ಬೋಧಿ (ಅರಳಿ) ಮರದಿದಿಂದ ಒಂದು ಕೊಂಬೆ ತಗೊಂಡು ಶ್ರೀ ಲಂಕೆಯಲ್ಲಿ ಮಹೇಂದ್ರ - ಸಂಘಮಿತ್ರರು ನೆಟ್ಟರು. ಆ ಮರ ಇಂದಿಗೂ ಅಲ್ಲೇ ಇದೆ. 

ಇಂಥ ಒಬ್ಬ ಅಪ್ರತಿಮ ರಾಜನನ್ನು ಮೆಚ್ಚಿ ಜನ ಅವನಿಗೆ 'ದೇವನಂ ಪ್ರಿಯ' ಎಂದು ಬಿರುದ್ದು ಕೊಟ್ಟರು. ದೇವನಂ ಪ್ರಿಯ ಅಂದರೆ ದೇವರಿಗೂ ಇಷ್ಟವಾದವನು ಅಂತ. 

ಏನಿರಬಹುದು ನೀತಿ?

೧. ಅಶೋಕನ ರಾಜ್ಯಕ್ಕಿಂತ ದೊಡ್ಡ ರಾಜ್ಯ ಜೇಂಗೀಸ್ಖಾನ್ದಾಗಿತ್ತು . ಅಲೆಕ್ಸಾಂಡರ್ ದಿ ಗ್ರೇಟ್ - ಅವನದು ಅಷ್ಟೇ ಅಶೋಕನ ರಾಜ್ಯಕ್ಕಿಂತದೊಡ್ಡದಾಗಿತ್ತು. ಆದರೆ ಅಶೋಕನನ್ನು ನಾವು ಒಂದು ಆದರ್ಶ ರಾಜನೆಂದು ನೋಡುತ್ತೀವಿ. ಅಲೆಕ್ಸಾಂಡರ್ ಅಥವಾ ಜೇಂಗೀಸ್ ಖಾನನ್ನು ಅಲ್ಲ. ಆದ್ದರಿಂದ ನಾವು ದುರಾಸೆಗೆ ಒಳಗಾಗದೆ ನಮಗಿರುವು ಶಕ್ತಿಯಿಂದ ಸಮಾಜಕ್ಕೆ ಒಳ್ಳೇದನ್ನು ಮಾಡುವ ಪ್ರಯತ್ನ ಮಾಡಿದರೆ ಒಳ್ಳೆಯದು. 

Friday, July 10, 2020

Stories for kids - 11 - Karna (part 2)

ಕರ್ಣನ ಕಥೆ - (ಎರಡನೆಯ ಭಾಗ)

ಕರ್ಣ ಮಹಾ ದಾನಿ ಆದ್ದರಿಂದ ಕೃಷ್ಣನಿಂದ 'ದಾನ ವೀರ ಶೂರ ಕರ್ಣ' ಎಂದು ಬಿರುದ್ದು ಪಡೆದನು. ಅವನ ಈ ಔದಾರ್ಯದಿಂದ ಅನೇಕ ಕಷ್ಟ ಅನುಭವಿಸಿದನು. 

ಕುರುಕ್ಷೇತ್ರ ಯುದ್ಧ ಆಗುವ ನಿಶ್ಚಯ ಆದಮೇಲೆ ಕುಂತಿಯು  ಕರ್ಣನನ್ನು ಭೇಟಿಆದಳು. ಕರ್ಣನು ಸಂಧ್ಯಾವಂದನೆ ಮಾಡುತ್ತಿರುವಾಗ ಕುಂತಿ ಕರ್ಣನ ಬಳಿ ಹೋದಳು. 
'ಕರ್ಣ, ನೀನು ವಾಸ್ತವಿಕವಾಗಿ ನನ್ನ ಜ್ಯೇಷ್ಠ ಪುತ್ರ. ಹಾಗಾಗಿ ಪಾಂಡವರಿಗೆ ಅಣ್ಣನು. ಈ ವಿಷಯ ಎಲ್ಲರ ಹತ್ತಿರ ಹೇಳಿದರೆ ಸಾಕು. ನಿನ್ನ ಪ್ರಿಯ ಮಿತ್ರ ದುರ್ಯೋಧನ ನಿನ್ನ ವಿರುದ್ಧ ಯುದ್ಧ ಮಾಡುವುದಿಲ್ಲ. ಯುಧಿಷ್ಠಿರ, ನೀನು ಅಣ್ಣನೆಂದು ತಿಳಿದರೆ, ಯುದ್ಧಕ್ಕೆಎಂದೂ  ಒಪ್ಪುವುದಿಲ್ಲ, ನಿನ್ನನ್ನೇ ರಾಜನಾಗಿ ಮಾಡುವನು. ಈ ವಿಷಯ ಎಲ್ಲರ ಹತ್ತಿರ ಹೇಳು, ಕರ್ಣ!' ಎಂದು ಕೇಳಿಕೊಂಡಳು ಕುಂತಿ. 
ಕರ್ಣನಿಗೆ ಅವನ ಜನ್ಮರಹಸ್ಯದ ವಿಷಯವನ್ನು ಕೃಷ್ಣನು ಆಗಲೇ ಹೇಳಿದ್ದನು. ಹಾಗಾಗಿ ಇದೇನು ಆಶ್ಚರ್ಯದ ವಿಷಯವಾಗಿರಲಿಲ್ಲ ಅವನಿಗೆ  
'ಮಾತೆ, ನೀನು ನನ್ನನ್ನು ಹುಟ್ಟಿದಾಗ ಸಮಾಜದ ಭಯದಿಂದ ಗಂಗೆಯಲ್ಲಿ ಬಿಟ್ಟಿದ್ದೆ. ಇಂದು ಕೂಡ ನೀನು ಸಮಾಜದ ಭಯದಿಂದ ಹೀಗೆ ಯಾರೂ  ನೋಡದಿರುವ ಸ್ಥಳದಲ್ಲಿ ಬಂದು ಭೇಟಿ ಆದೆ. ನೀನು ಬೇಕಿದ್ದರೆ ಈ ವಿಷಯ ನೀನೆ ಎಲ್ಲರ ಹತ್ತಿರ ಹೇಳಬಹುದಿತ್ತು. ನನ್ನನ್ನು ಗರ್ವದಿಂದ ಮಗನೆಂದು ಸ್ವೀಕರಿಸಬಹುದಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ನೀನು ಕೇಳುತ್ತಿರುವುದು ನಾನು ಕೊಡಲು ಸಾಧ್ಯವಿಲ್ಲ. ನಾನು ಈ ಹಂತದಲ್ಲಿ ದುರ್ಯೋಧನನ ಪರ ಬಿಡುವುದು ಸಾಧ್ಯವಿಲ್ಲ. ಆದರೆ ನೀನು ನನ್ನಲ್ಲಿ ಕೇಳಿಕೊಂಡು ಬಂದಿರುವುದರಿಂದ ನಿನ್ನನ್ನು ಬರಿ ಕಯ್ಯಿ ಹಿಂತಿರುಗಿಸುವುದು ನನಗೆ ಇಷ್ಟ ಇಲ್ಲ.'

ಮುಂದುವರೆಯುತ್ತ 'ಮಾತೆ, ಸಮಾಜದ ದೃಷ್ಟಿಯಲ್ಲಿ ೫ ಪಾಂಡವರಿದ್ದಾರೆ. ಯುದ್ಧ ಆದಮೇಲೂ ಕೂಡ ೫ ಜನ ಪಾಂಡವರೇ ಇರುತ್ತಾರೆ. ನಾನು ಬದುಕಿದರೆ ಅರ್ಜುನ ಇರುವುದಿಲ್ಲ. ಅರ್ಜುನ ಬದುಕಿದರೆ  ನಾನು ಇರುವುದಿಲ್ಲ. ನಿನ್ನ ಮಕ್ಕಳ ಸಂಖ್ಯೆ ಬದಲಾಗುವುದಿಲ್ಲ.'

ತಾಯಿಗೆ ಕೊಟ್ಟ ಈ ಮಾತಿನಿಂದ, ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನು ಯುಧಿಷ್ಠಿರ, ಭೀಮ, ನಕುಲ, ಸಹದೇವರನ್ನು ಸೋಲಿಸಿದರೂ  ಅವರನ್ನು ಸಾಯಿಸುಲ್ಲ. 
--
ಕರ್ಣನ  ಕವಚ ಕುಂಡಲಗಳು ಇರುವವರುಗೂ ಅವನನ್ನು ಸಾಯಿಸುವುದು ಸಾಧ್ಯವಿಲ್ಲ ಎಂದು ತಿಳಿದು ಅರ್ಜುನನ ತಂದೆ ಆದಇಂದ್ರನು ಒಂದು ಉಪಾಯ ಮಾಡಿದನು. 

ಕರ್ಣನ ದಾನ ಮಾಡುವು ಸ್ವಭಾವ ತಿಳಿದಿದ್ದ ಸೂರ್ಯ ದೇವ ಒಮ್ಮೆ ಪ್ರಕಟವಾಗಿ 'ಕರ್ಣ, ನಾಳೆ ಬೆಳಿಗ್ಗೆ ಒಂದು ಬ್ರಾಹ್ಮಣನ ವೇಷದಲ್ಲಿ ಇಂದ್ರನು ಬಂದು ನಿನ್ನ ಕವಚ ಕುಂಡಲಗಳನ್ನು ಕೇಳುತ್ತಾನೆ. ನೀನು ಕೊಡಬೇಡ. ನಿನ್ನ ಕವಚ ಇರುವವರೆಗೂ ನಿನನ್ನು ಯಾವ ಅಸ್ತ್ರವು ಏನೂ ಮಾಡಲಾರದು. '

ನಮಸ್ಕರಿಸುತ್ತ ಕರ್ಣ ಎಂದನು 'ಸೂರ್ಯ ದೇವ , ನನ್ನನ್ನು ಯಾರಾದರೂ ಏನಾದರೂ ಕೇಳಿದರೆ ನಾನು ಅದನ್ನು ನಿರಾಕರಿಸುವುದಿಲ್ಲ. ನನ್ನ ಪ್ರಾಣಕ್ಕೆ ಹಾನಿಯಾದರೂ ಸರಿ. '

ಸೂರ್ಯನು ಹೇಳಿದಂತೆಯೇ ಮರು ದಿನ ಬೆಳಿಗ್ಗೆ ಇಂದ್ರನು ಬ್ರಾಹ್ಮಣನ ವೇಷದಲ್ಲಿ ಬಂದನು. ಬಂದು ಕರ್ಣನ ಕವಚ ಕುಂಡಲಗಳನ್ನು ಕೇಳಿದನು. ಕರ್ಣನು ನಿಸ್ಸಂದೇಹವಾಗಿ ಅದನ್ನು ಕೂಡ ದಾನ ಮಾಡಿದನು. 
ಇಂದಿರನ ಹೃದಯ ಕರಗಿತು. 
ಕರ್ಣನಿಗೆ ಅವನ ಹತ್ತಿರ ಇದ್ದ ಶಕ್ತಿ ಅಸ್ತ್ರವನ್ನು ಕೊಟ್ಟನು. ಆ ಶಕ್ತಿ ಅಸ್ತ್ರವನ್ನು ಕರ್ಣ ಅರ್ಜುನನಿಗೆ ಎಂದು ವಿಶೇಷವಾಗಿ ಇಟ್ಟಿದ್ದನು. ಆದರೆ ಘಟೋತ್ಕಚನನ್ನು ಕೊಲ್ಲಲು ಉಪಯೋಗಿಸಬೇಕಾಯಿತು. 
---

ಮಹಾಭಾರತದಲ್ಲಿ ಕರ್ಣನನ್ನು  'ಸೂತ ಪುತ್ರ' ಎಂದು ಪಾಂಡವರೆಲ್ಲರೂ ಕರೆಯುತ್ತಿದ್ದರು. ಆಗಿನ ಕಾಲ ಹೇಗಿತ್ತೆಂದರೆ ಕೆಳಜಾತಿಯವನು ಅವನ ಜಾತಿಯ ವೃತ್ತಿ ಬಿಟ್ಟು ಬೇರೆಯದು ಆರಿಸಿದರೆ ಅದೇ ತಪ್ಪು ಎನ್ನುವಂತೆ ಆಡಿಕೊಳ್ಳುತ್ತಿದ್ದರು. ಕುರುಕ್ಷೇತ್ರದಲ್ಲಿ ಅರ್ಜುನನ ವಿರುದ್ಧ ಯುದ್ಧ ಮಾಡಿದಾಗ ಕರ್ಣನ ರಥ ನೆಲದಲ್ಲಿ ಕುಗ್ಗಿ  ಹೋಗುತ್ತೆ. ಕರ್ಣನ ಸಾರಥಿಯಾದ ಶಲ್ಯ ರಾಜನು ಸಹಾಯ ಮಾಡಲಿಲ್ಲ. ಶಲ್ಯನು ವಾಸ್ತವವಾಗಿ ನಕುಲ ಸಹದೇವರ ಸೋದರ ಮಾವನು. ಕರ್ಣನು ರಥದ ಚಕ್ರ ಎತ್ತುತ್ತಿರುವಾಗ ಅರ್ಜುನನು ಬಾಣ ಬಿಟ್ಟು ಅವನನ್ನು ಕೊಂದನು. ಹೀಗಾಗಿ ಒಬ್ಬ ಸಾರಾರ್ಥಿ ಮಗನೆನ್ನಿಸಿಕೊಂಡವನು ಕೊನೆಗೆ ಸಾರಥಿ ಮಾಡುವ ಕೆಲಸ ಮಾಡುತ್ತಲೇ ಪ್ರಾಣ ಕಳೆದುಕೊಂಡನು. 
---

ಹಿಂದೂ ಧರ್ಮದಲ್ಲಿ ಕರ್ಮ ಎನ್ನುವುದು ತುಂಬಾ ಮುಖ್ಯ. ನಾವು ಏನಾದರೂ ಕಷ್ಟ ಪಡುತ್ತಿದರೆ ಅದು 'ನಮ್ಮ ಕರ್ಮ ' ಎಂದೆನ್ನುತ್ತೀವಿ. ಅಂದರೆ ಹಿಂದೆ ಮಾಡಿದ ಕೆಟ್ಟ ಕರ್ಮಗಳಿಂದ ಇಂದು ನಮಗೆ ಕಷ್ಟ ಆಗುತ್ತಿದೆ ಎಂದು. ಹಾಗೆಯೇ ಹಿಂದೆ ಮಾಡಿದ್ದ ಒಳ್ಳೆ ಕರ್ಮಗಳ ಫಲ ಇಂದು ಸಿಗಬಹುದು. 

ರಾಮಾಯಣದಲ್ಲಿ ವಾಲಿ-ಸುಗ್ರೀವರಿಗೆ ಯುದ್ಧ ಆದಾಗ ರಾಮನು ಸುಗ್ರೀವನ ಪರ ಇದ್ದನು. ಸುಗ್ರೀವನು ಸೂರ್ಯ ಪುತ್ರನು. ವಾಲಿ ಇಂದ್ರನ ಪುತ್ರನು. ಮಹಾಭಾರತದಲ್ಲಿ ವಿಷ್ಣು ಕೃಷ್ಣನಾಗಿ ಬಂದನು. ಇಂದ್ರನ ಮಗನಾದ ಅರ್ಜುನನ ಪರ ಇದ್ದನು. ಸೂರ್ಯನ ಮಗ ಕರ್ಣನನ್ನ ಸೋಲಿಸಲು ಸಹಾಯ ಮಾಡಿದನು. ಹೀಗೆ ವಿಷ್ಣು ಒಂದು ಜನ್ಮದಲ್ಲಿ ಸೂರ್ಯನ ಮಗನಿಗೆ ಸಹಾಯ ಮಾಡಿದನು, ಮತ್ತೊಂದು ಜನ್ಮದಲ್ಲಿ ಇಂದ್ರನ ಮಗನಿಗೆ ಸಹಾಯ ಮಾಡಿದನು. 

ಏನಿರಬಹುದು ನೀತಿ?

೧. ಕರ್ಣ ದಾನಿ ಸರಿ. ಆದರೆ ಕೆಟ್ಟ ಉದ್ದೇಶದಿಂದ ಬಂದ ಇಂದ್ರನಿಗೆ ಕವಚ ಕುಂಡಲ ದಾನ ಮಾಡುವ ಅಗತ್ಯ ಇತ್ತೇ? ಕೆಲವೊಮ್ಮೆ ಬೇರೆಯವರು ನಮಗೆ ಕೊಟ್ಟ ಹೆಸರನ್ನು ಉಳಿಸಿಕೊಳ್ಳಬೇಕೆಂದು ಏನೆಲ್ಲಾ ಮಾಡುತ್ತೀವಿ! ಆದರೆ ಕರ್ಣ ಹೀಗೆ ಮಾಡದೆ ಇದ್ದಿದ್ದರೆ ಕರ್ಣನನ್ನ ನಾವು ದಾನ ಶೂರ ಎಂದು ಕರೆಯುತ್ತಿದ್ದವೇ? 

Monday, July 6, 2020

Stories for kids - 10 - Karna's story (part1)

ಕರ್ಣನ ಕಥೆ - (ಮೊದಲನೆ ಭಾಗ)

ಕುಂತಿಗೆ ದುರ್ವಾಸ ಮುನಿ ಒಂದು ವರ ನೀಡಿದ್ದರು. ವರ ಏನೆಂದರೆ ಕುಂತಿ ಯಾವುದೇ ದೇವರನ್ನು ಕೇಳಿಕೊಂಡರೂ ಅವರಿಂದ ಒಂದು ಮಗು ಆಗುವುದು. ಮದುವೆಯ ಮುಂಚೆ ಸಿಕ್ಕ ಈ ವರದ ಮೇಲೆ ಕುಂತಿಗೆ ಕುತೂಹಲ. ಹಾಗಾಗಿ ಸೂರ್ಯ ದೇವರನ್ನು ಮಗು ಬೇಕೆಂದು ಕೇಳಿಕೊಂಡಳು. ದೂರ್ವಾಸ ಮುನಿಗಳು ಹೇಳಿದಂತೆಯೇ ಅವಳಿಗೆ ಸೂರ್ಯ ದೇವರಿಂದ ಒಂದು ಮಗು ಸಿಕ್ಕಿತು. ಆ ಮಗು ಹುಟ್ಟಿದ್ದಾಗಲೇ ಕಿವಿಯಲ್ಲಿ ಕುಂಡಲಗಳು ಹಾಗೂ ಮೈಗೆ ಕವಚ ಧರಿಸಿಕೊಂಡಿತ್ತು. ಸೂರ್ಯನಂತೆಯೇ ತೇಜಸ್ವಿ ಮಗು. ಆದರೆ ಇನ್ನೂ ಮದುವೆಯಾಗದೆಯೇ ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂದು ಕುಂತಿ ಭಯ ಪಟ್ಟಳು. ಭಯದಲ್ಲಿ ಮಗುವನ್ನು ಒಂದು ಬುಟ್ಟಿಯಲ್ಲಿ ಹಾಕಿ ಅದನ್ನು ಗಂಗೆಯಲ್ಲಿ ಬಿಟ್ಟಳು. ಆ ಮಗುವೇ ಕರ್ಣ. 

ನದಿಯಲ್ಲಿ ಬುಟ್ಟಿಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಈ ಮಗುವನ್ನು ಒಬ್ಬ ರಥ ಓಡಿಸುವವನು, ಅಂದರೆ ಸೂತನೊಬ್ಬನು ನೋಡಿದನು. ತನಗೆ ಹೇಗಿದ್ದರೂ ಮಕ್ಕಳಿರಲಿಲ್ಲ. ಆ ಮಗುವನ್ನು ದತ್ತು ತಗೊಂಡನು. 

ಹುಟ್ಟುಗುಣ ಸುಟ್ಟರು ಹೋಗುವುದಿಲ್ಲ. ಕರ್ಣನಿಗೆ ಧನುರ್ವಿದ್ಯೆಯಲ್ಲಿ ಆಸಕ್ತಿ ಮೂಡಿತು. ಕಲಿಯಲೆಂದು ಪರಶುರಾಮರ ಹತ್ತಿರ ಹೋದನು. ಪರಶುರಾಮರು ಬ್ರಾಹ್ಮಣರಿಗೆ ಬಿಟ್ಟು ಇನ್ನು ಯಾರಿಗೆ ಹೇಳಿಕೊಡುತ್ತಿರಲಿಲ್ಲ. ಕ್ಷತ್ರಿಯರೆಂದರೆ  ಅವರಿಗೆ ಆಗದು.  ಇದು ತಿಳಿದಿದ್ದ ಕರ್ಣ ಅವರ ಶಿಷ್ಯನಾಗಬೇಕೆಂದು ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿದನು. ಧನುರ್ವಿದ್ಯೆಯಲ್ಲಿ ಕರ್ಣನನ್ನು ಮೀರಿಸುವವರು ಇಲ್ಲ ಎನ್ನುವಷ್ಟು ಚೆನ್ನಾಗಿ ಪರಶುರಾಮರ ಹತ್ತಿರ ಕಲಿತನು. 

ಇಂದ್ರನಿಗೆ ತನ್ನ ಮಗನಾದ ಅರ್ಜುನನೇ ಸರ್ವಶ್ರೇಷ್ಠ ಧನುರ್ಧಾರಿ ಆಗಬೇಕು ಎಂದಿತ್ತು. ಒಂದು ಮಧ್ಯಾಹ್ನ ಗುರು ಪರಶುರಾಮರು ಕರ್ಣನ ತೊಡೆಯಮೇಲೆ ಮಲಗಿದ್ದರು. ಕರ್ಣ ಬ್ರಾಹ್ಮಣ ಅಲ್ಲ ಎನ್ನುವ ಬಣ್ಣ ಬಯಲು ಮಾಡಬೇಕೆಂದು ಇಂದ್ರನು ಒಂದು ಕಾಗೆಯ ರೂಪದಲ್ಲಿ ಬಂದನು. ಕರ್ಣನ ತೊಡೆ ಕುಕ್ಕಲು ಆರಂಭಿಸಿದನು. ಎಷ್ಟು ಓಡಿಸಲು ಪ್ರಯತ್ನಿಸಿದರೂ ಆ ಕಾಗೆ ಮತ್ತೆ ಮತ್ತೆ ಬಂದು ಕರ್ಣನ ತೊಡೆ ಕುಕ್ಕುತಿತ್ತು. ಎಷ್ಟೇ ಕಷ್ಟ ಆದರೂ ಗುರುಗಳ ನಿದ್ದೆ ಹಾಳಾಗಬಾರದೆಂದು ಕರ್ಣನು ನೋವ್ವನ್ನು ಸದ್ದಿಲ್ಲದೆ ಅನುಭವಿಸಿದನು. ಕರ್ಣನ ತೊಡೆಯಿಂದ ರಕ್ತ ಬರಲು ಆರಂಭಿಸಿತು. ಆ ಬಿಸಿ ರಕ್ತ ಗುರು ಪರಶುರಾಮರ ಕೆನ್ನೆಗೆ ಸೋಕಿ ಅವರು ಎಚ್ಚರಗೊಂಡರು. 
'ಒಬ್ಬ ಬ್ರಾಹ್ಮಣನಿಗೆ ನೋವ್ವು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ.  ನಿಜ ಹೇಳು, ನೀನು ಯಾರು?!' ಎಂದು ಕೋಪದಿಂದ ಕೇಳಿದರು. 
'ಗುರುಗಳೇ, ನನಗೆ ನನ್ನ ಜನ್ಮ ಕೊಟ್ಟ ತಂದೆ ತಾಯಿ ಯಾರೆಂದು ತಿಳಿದಿಲ್ಲ. ನನ್ನ ಸಾಕಿದ ತಂದೆ ಒಬ್ಬ ಸಾರಥಿ. ' ಎಂದ ಕರ್ಣ. 
'ನೀನು ಖಂಡಿತವಾಗಿಯೂ ಕ್ಷತ್ರಿಯನೇ ಆಗಿರಬೇಕು. ಕ್ಷತ್ರಿಯರೆಂದರೆ ನನಗೆ ಎಷ್ಟು ದ್ವೇಷ ಅಂತ ಗೊತ್ತಿಲ್ಲವಾ?!' ಎಂದು ಗರ್ಜಿಸಿದನು ಪರಶುರಾಮ. 
'ಸುಳ್ಳು ಹೇಳಿ ನೀನು ನನ್ನಿಂದ ಕಲಿತ ವಿದ್ಯೆಯೆಲ್ಲ ನಿನಗೆ ಯಾವಾಗ ಅತಿ ಹೆಚ್ಚು ಬೇಕಾಗಿರುತ್ತದೆಯೋ ಆಗ ಮರೆತು ಹೋಗುತ್ತೀಯಾ!' ಎಂದು ಶಾಪ ಕೊಟ್ಟನು ಪರಶುರಾಮ. 

ಎಷ್ಟೋ ವರ್ಷಗಳ ನಂತರ ಕುರುಕ್ಷೇತ್ರ ಯುದ್ಧದಲ್ಲಿ, ಅರ್ಜುನನನ್ನೇ ತನ್ನ ಗುರಿಯಾಗಿ ಮಾಡಿಕೊಂಡಿದ್ದ ಕರ್ಣ ಅವನೆದುರು ಬಂದಾಗ ಕಲಿತ ವಿದ್ಯೆಯೆಲ್ಲ ಮರೆತು ಹೋದನು.!

ದ್ರೋಣಾಚಾರ್ಯರಿಂದ ವಿದ್ಯಾಭ್ಯಾಸ ಪಡೆದು ಪಾಂಡವರು, ಕೌರವರು ಅವರವರು ಕಲಿತ  ವಿದ್ಯೆಯನ್ನು ಪ್ರದರ್ಶಿಸುತ್ತಿದ್ದರು. ಅರ್ಜುನನು ಧನುರ್ವಿದ್ಯೆಯಿಂದ ಎಲ್ಲರನ್ನು ಮೂಕವಿಸ್ಮಿತ ಮಾಡಿದನು. ಇದನ್ನು ದೂರದಿಂದ ನೋಡುತಿದ್ದ ಕರ್ಣನು, 'ಅರ್ಜುನ ಮಾಡಿದ್ದೆಲ್ಲವನ್ನು ನಾನು ಮಾಡಬಲ್ಲೆ. ಅವನಿಗಿಂತ ಚೆನ್ನಾಗಿ ಮಾಡಬಲ್ಲೆ!' ಎಂದು ಕೂಗಿದನು. 

'ನೀನು ಯಾರು? ನಿನ್ನ ಪರಿಚಯ ಏನು?' ಎಂದು ಭೀಷ್ಮಾಚಾರ್ಯರು ಕೇಳಿದರು. 
'ನನ್ನ ಹೆಸರು ಕರ್ಣ. ನಾನು ಧನುರ್ವಿದ್ಯೆಯಲ್ಲಿ ಪರಿಣಿತನು. ನಾನು ಒಬ್ಬ ಸೂತಪುತ್ರ. ' ಎಂದ ಕರ್ಣ. 
'ಇದು ಕ್ಷತ್ರಿಯರ ವಿದ್ಯೆ, ಕ್ಷತ್ರಿಯರಲ್ಲೆದೆ ಬೇರೆಯವರಿಗೆ ಅನುಮತಿ ಇಲ್ಲ' ಎಂದರು  ಭೀಷ್ಮಾಚಾರ್ಯರು. 
ಇದನ್ನು ನೋಡುತ್ತಿದ್ದ ದುರ್ಯೋಧನನು, ಕರ್ಣನ ಆತ್ಮವಿಶ್ವಾಸ ನೋಡಿ ಅವನು  ನಿಜವಾಗಿಯೂ ಒಳ್ಳೆಯ ಧನುರ್ಧಾರಿಯಾಗಿರಬೇಕೆಂದು ಗುರುತಿಸಿದನು. ಅದೇ ಕ್ಷಣದಲ್ಲಿಯೇ ಅವನನ್ನು ಅಂಗ ದೇಶದ ರಾಜ ಎಂದು ಘೋಷಿಸಿದನು. 
ಆದರೂ ಭೀಷ್ಮಾಚಾರ್ಯರು ಕರ್ಣನ ಧನುರ್ವಿದ್ಯೆ ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ. 
ರಾಜಮನೆತನವೆಲ್ಲ ಅವನ ವಿರುದ್ಧ ಇರುವಾಗ ದುರ್ಯೋಧನನೊಬ್ಬನೇ ಕರ್ಣನ ಪರ ಇದ್ದಿದ್ದು. ಅಂದಿಂದ ಕರ್ಣ ದುರ್ಯೋಧನರು ಮಿತ್ರರಾದರು. ಕರ್ಣನಿಗೆ ದುರ್ಯೋಧನನೆಂದರೆ ಪ್ರಾಣ. ದುರ್ಯೋಧನ ಸರಿ ಮಾಡಲಿ, ತಪ್ಪಿ ಮಾಡಲಿ ಅವನ ಪರವೇ. ಹೀಗಾಗಿ ಕುರುಕ್ಷೇತ್ರದಲ್ಲಿ ದುರ್ಯೋಧನನು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿದರೂ ಸಹ ಅವನು ದುರ್ಯೋಧನನ ಜೊತೆ ಬಿಡಲಿಲ್ಲ. 

ಕರ್ಣನದು ಒಂದು ದುರಂತ ಕಥೆ. ಒಂದಾದಮೇಲೊಂದು ಕಷ್ಟಗಳು ಅವನ ಎದುರಾದವು. ಸರಿ ಯಾವುದು ತಪ್ಪು ಯಾವುದು ಎಂದು ತಿಳಿದರೂ ಕೂಡ ದುರ್ಯೋಧನನ ಋಣ ತೀರಿಸಬೇಕೆಂದು ಅವನು ದುರ್ಯೋಧನನ ಕಯ್ಯಿ ಬಿಡಲಿಲ್ಲ. ಕುರುಕ್ಷೇತ್ರ ಯುದ್ಧ ಆಗುವುದು ನಿಶ್ಚಯವಾದಾಗ ಕೃಷ್ಣ ಕರ್ಣನನ್ನು ಭೇಟಿ ಆದನು. ಕೃಷ್ಣ ಕರ್ಣನ ಜನ್ಮರಹಸ್ಯವನ್ನು ಹೇಳಿದನು.
' ಕರ್ಣ, ನೀನೆ ಜ್ಯೇಷ್ಠ ಪಾಂಡು ಪುತ್ರ. ಈ ವಿಷಯ ಎಲ್ಲರಿಗೂ ಹೇಳಿದರೆ ಯುದ್ಧ ತಡೆಯಬಹುದು. ಯುಧಿಷ್ಠಿರ ನೀನು ಅಣ್ಣ ಎಂದು ತಿಳಿದರೆ ಇಂದಿಗೂ ರಾಜನಾಗಲು ಒಪ್ಪುವುದಿಲ್ಲ. ದುರ್ಯೋಧನ ಹೇಗಿದ್ದರೂ ನಿನ್ನ ಗೆಳೆಯ. ಅವನಿಗೇನು ಅಭ್ಯಂತರ ಇರಲು ಸಾಧ್ಯ ಇಲ್ಲ.' ಎಂದು ಹೇಳಿದನು ಕೃಷ್ಣ. 
ಆದರೆ ಕರ್ಣ ಒಪ್ಪಲಿಲ್ಲ. 
'ಕೃಷ್ಣ, ನಾನೇನಾದರೂ ರಾಜನಾದರೆ ನನ್ನ ಪ್ರಿಯ ಮಿತ್ರ ದುರ್ಯೋಧನನಿಗೆ ರಾಜ್ಯವನ್ನು ಕೊಟ್ಟಿ ಬಿಡುತ್ತೀನಿ. ಆದರೆ ಅದು ಅಧರ್ಮ ಎಂದು ನನಗೆ ಗೊತ್ತು. ಅದರಿಂದ ನನ್ನ ಜನ್ಮ ರಹಸ್ಯ ರಹಸ್ಯವಾಗಿಯೇ ಇರಲಿ. ನಾನು ದುರ್ಯೋಧನನ ಪರವೇ ಯುದ್ಧ ಮಾಡುತ್ತೀನಿ.' ಎಂದ ಕರ್ಣ. 
ಕೃಷ್ಣನು ಬೇಕಂತಲೇ ಅಷ್ಟು ದಿನ ರಹಸ್ಯ ಹೇಳದೆ ಯುದ್ಧದ ಕೆಲವೇ ದಿನಗಳ ಮುಂಚೆ ಹೇಳಿದನು. ಕರ್ಣನ ಮನೋಬಲ ಕಮ್ಮಿ ಮಾಡುವುದೇ ಅವನ ಉದ್ದೇಶವಾಗಿತ್ತು. 

ಇನ್ನೂ ಸ್ವಲ್ಪ ವಿಷಯಗಳಿವೆ ಕರ್ಣನ ಕಥೆಯಲ್ಲಿ , ಮುಂದಿನ ಭಾಗದಲ್ಲಿ ನೋಡೋಣ. 

ಏನಿರಬಹುದು ನೀತಿ?
೧. ಕೆಟ್ಟವರ ಸಹವಾಸ ಹಾಗು ಅವರ ಉಪಕಾರದಿಂದ ದೂರ ಇರುವುದೇ ಉತ್ತಮ. ಕರ್ಣನೇನಾದರೂ ದುರ್ಯೋಧನನ ಮಿತ್ರನಾಗಿಲ್ಲದೆ ಇದ್ದಿದ್ದರೆ, ಮಹಾಭಾರತದ ಕಥೆಯೇ ಬೇರೆಯಾಗಿರುತ್ತಿತ್ತು! ಅದಕ್ಕೆ ಒಳ್ಳೆಯವರೊಂದಿಗೆ ನಾವು ಸ್ನೇಹ ಬೆಳೆಸುವುದು ಒಳ್ಳೇದು. 
೨. ಕೇವಲ ಸರಿಯಾದ ದಾರಿ ಏನೆಂದು ಅರಿತಿರೆ ಸಾಲದು. ಸರಿಯಾದ ದಾರಿಯಲ್ಲಿ ನಡಿಯಬೇಕು ಕೂಡ. ದುರ್ಯೋಧನ ಮಾಡುತಿದ್ದ ಎಲ್ಲ ತಪ್ಪುಗಳನ್ನು ಕರ್ಣ ಗುರುತಿಸುತ್ತಿದನು ಆದರೂ ಅದರಲ್ಲಿ ಭಾಗಿ ಆದನೆ ವಿನಃ ದುರ್ಯೋಧನನನ್ನು ತಿದ್ದಲು ಪ್ರಯತ್ನಿಸಲಿಲ್ಲ. ಅವನ ಜೊತೆ ಸೇರಿ ಕರ್ಣನೂ ಆ ತಪ್ಪುಗಳನ್ನು ಮಾಡಿದನು.  

Saturday, July 4, 2020

Stories for kids - 9 - Jayadratha

ಜಯದ್ರಥನ ಕಥೆ 

೧೦೦ ಜನ ಕೌರವರಿಗೆ ಒಬ್ಬಳೇ ತಂಗಿ. ಅವಳು ದುಶ್ಶಲೆ . ಅವಳ  ಗಂಡ ಸಿಂಧು ರಾಜ್ಯದ ರಾಜ ಜಯದ್ರಥನು. 
 
ಕುರುಕ್ಷೇತ್ರದ ೧೩ನೇ ದಿನ ಕೌರವರು ಅನ್ಯಾಯವಾಗಿ ಅಭಿಮನ್ಯುವನ್ನು ಕೊಂದರು . ಅಭಿಮನ್ಯುವಿನ ಜೊತೆ ಯುಧಿಷ್ಠಿರ, ಭೀಮ, ನಕುಲ, ಸಹದೇವರು ಚಕ್ರವ್ಯೂಹವನ್ನು ಪ್ರವೇಶಿಸುವದನ್ನು ಜಯದ್ರಥನು ತಡೆದನು.  

ಮಗನ ಸಾವಿಗೆ ಕಾರಣನಾದ ಜಯದ್ರಥನನ್ನು ಮರುದಿನದ ಸೂರ್ಯಾಸ್ಥ ಆಗುವ ಮುಂಚೆ ಕೊಲ್ಲುತ್ತೀನಿ ಎಂದು ಅರ್ಜುನನು ಶಪಥ ಮಾಡಿದನು. ಕೊಲ್ಲದಿದ್ದಲ್ಲಿ ಅಗ್ನಿ ಪ್ರವೇಶ ಮಾಡುತ್ತೀನಿ ಎಂದು ಕೂಡ ಶಪಥ ಮಾಡಿದನು. 

ಈ ವಿಷಯ ತಿಳಿದ ಕೌರವರು ಏನಾದರೂ ಮಾಡಿ ಜಯದ್ರಥನನ್ನು ಆ ಒಂದು ದಿನ ಕಾಪಾಡಲೇ ಬೇಕು ಎಂದು ನಿಶ್ಚಯ ಮಾಡಿದರು. 
೧೪ನೇ ದಿನ. ಸಮಸ್ತ ಕುರು  ಸೇನೆ ಅರ್ಜುನನನ್ನು ಜಯದ್ರಥನಿಂದ ಆದಷ್ಟು ದೂರ ಇಟ್ಟರು. ಒಂದು ಕಮಲ ವ್ಯೂಹವನ್ನು ರಚಿಸಿ ಅರ್ಜುನನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅಂದು ಅರ್ಜುನನ  ಬಾಣಗಳನ್ನು ಎದುರಿಸುವುದು ಅಸಾಧ್ಯ ಎನ್ನುವಂತಿತ್ತು. 

ದ್ರೋಣಾಚಾರ್ಯರು ಎದುರಾದಾಗ ಅರ್ಜುನ ಅವರೊಂದಿಗೆ ಯುದ್ಧ ಮಾಡದಿರುವ ಅನುಮತಿ ತಗೊಂಡು ಮುಂದು ವರೆದನು. ಅರ್ಜುನನ ದಾರಿಯಲ್ಲಿ ದುರ್ಯೋಧನ ಬಂದನು. ದುರ್ಯೋಧನನನ್ನು ಮೂರ್ಛೆ ತಪ್ಪುವ ಹಾಗೆ ಮಾಡಿದ ಅರ್ಜುನ. ಹೀಗೆ ಅರ್ಜುನನ ರಥ ಬಂದು ಕೊನೆಗೂ ಜಯದ್ರಥನ ರಥದ ಎದುರಿಗೆ ಬಂದು ನಿಂತಿತು. ಆದರೂ ಕುರು ಸೇನೆ ಮತ್ತೆ ಮಧ್ಯ ಬಂದು ಅರ್ಜುನನಿಗೆ ಜಯದ್ರಥನೊಂದಿಗೆ ಯುದ್ಧ ಮಾಡಲು ಬಿಡಲಿಲ್ಲ. 

ಹೀಗೇ ನಡಿಯುತ್ತಿದ್ದರೆ ಸೂರ್ಯಾಸ್ಥ ಆಗುವ ಮುನ್ನ ಜಯದ್ರಥನನ್ನು ಸಾಯಿಸುವುದು ಸಾಧ್ಯ ಇಲ್ಲ ಎಂದು ಕೃಷ್ಣನಿಗೆ ಅರ್ಥ ಆಯಿತು. ಯಾರಿಗೂ ತಿಳಿಯದ ಹಾಗೆ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡವಾಗಿ ಇಟ್ಟ ಕೃಷ್ಣ. ಸುದರ್ಶನ ಚಕ್ರ ಅಡ್ಡ ಬಂದಾಗ ತಕ್ಷಣ ಕತ್ತಲೆ ಆಯಿತು. ಕೌರವರೆಲ್ಲ ಸಂಭ್ರಮ ಪಟ್ಟರು. ಕುರು ಸೇನೆಯ ಹಿಂದೆ ಇದ್ದ ಜಯದ್ರಥ ಮುಂದೆ ಬಂದು ಅರ್ಜುನನನ್ನು ಗೇಲಿ ಮಾಡಲು ಆರಂಭಿಸಿದ. ಅರ್ಜುನನು ಇನ್ನ ಅಗ್ನಿ ಪ್ರವೇಶ ಮಾಡುವುದು ತಪ್ಪಲ್ಲ ಎಂದು ಎಲ್ಲರು ಅಂದು ಕೊಂಡರು. ಆವಾಗ ಕೃಷ್ಣ ಸೂರ್ಯನಿಗೆ ಅಡ್ಡ ಇದ್ದ ತನ್ನ ಸುದರ್ಶನ ಚಕ್ರವನ್ನು ತೆಗೆದನು. ಆಗ ಸೂರ್ಯಾಸ್ಥ ಆಗಿಲ್ಲ ಎನ್ನುವುದು ಎಲ್ಲರಿಗೂ ಸ್ಪಷ್ಠ ಆಯಿತು. ಭಯದಿಂದ ಜಯದ್ರಥ ಓಡಲು ಆರಂಭಿಸಿದನು. ಆವಾಗ ಅರ್ಜುನ ಬಾಣ ಬಿಟ್ಟು ಜಯದ್ರಥನ ತಲೆ ಕತ್ತರಿಸಿದನು. 

ಜಯದ್ರಥನಿಗೆ ಅವನ ತಂದೆ ವ್ರಿಧಾಕ್ಷತ್ರನಿಂದ ಒಂದು ವರ ಇತ್ತು. ವರ ಏನೆಂದರೆ - ಯಾರು ಜಯದ್ರಥನ ತಲೆ ನೆಲಕ್ಕೆ ಬೀಳುವಹಾಗೆ ಮಾಡುತ್ತಾರೆಯೋ ಅವರ ತಲೆಯಲ್ಲಿ ಮರುಕ್ಷಣವೇ ಒಂದು ವಿಸ್ಫೋಟವಾಗಿ ಅವರು ಸಾಯುತ್ತಾರೆ. 

ಹಾಗಾಗಿ ಅರ್ಜುನ ಜಯದ್ರಥನ ತಲೆ ಕತ್ತರಿಸಿದಾಗ ಬಾಣ ಹೇಗೆ ಬಿಟ್ಟನೆಂದರೆ ಜಯದ್ರಥನ ತಲೆ ನೆಲಕ್ಕೆ ಬೀಳಲಿಲ್ಲ. ಹಾರಿ ಹೋಗಿ ಅವನ ತಂದೆ ಋಷಿ ವ್ರಿಧಾಕ್ಷತ್ರನ  ಮಡಿಲಲ್ಲಿ ಹೋಗಿ  ಬಿತ್ತು . ಗಾಬರಿಯಿಂದ ವ್ರಿಧಾಕ್ಷತ್ರನು ಎದ್ದು ನಿಂತನು. ನಿಂತ ತಕ್ಷಣ ಜಯದ್ರಥನ ತಲೆ ನೆಲದ ಮೇಲೆ ಬಿತ್ತು. ಆವಾಗ ವ್ರಿಧಾಕ್ಷತ್ರನ ತಲೆಯಲ್ಲಿ ಒಂದು ವಿಸ್ಫೋಟ ಆಗಿ ಅವನು ಸತ್ತನು. 

ಹೀಗೆ ಮುಗೀತು ಜಯದ್ರಥನ ಕಥೆ. 

---
ಆ ದಿನ ಕೃಷ್ಣ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡ ಹಾಕಲಿಲ್ಲ, ಸೂರ್ಯಗ್ರಹಣ ಆಗಿತ್ತು ಎಂದು ಕೂಡ ಹೇಳುತ್ತಾರೆ. 

ಕುರುಕ್ಷೇತ್ರದ ಈ ಕಥೆಯ ಹಿನ್ನೆಲೆ ಏನಂದರೆ:
ಪಾಂಡವರು ವನವಾಸದಲ್ಲಿದ್ದಾಗ ಜಯದ್ರಥನು ದ್ರೌಪಾದಿಯನ್ನು ಅಪಹರಿಸಲು ಪ್ರಯತ್ನಿಸಿದ್ದನು. ಆದರೆ ಅರ್ಜುನ ಮತ್ತು ಭೀಮ ಅವನನ್ನು ಸೆರೆ ಹಿಡಿದುಬಿಟ್ಟರು. ತಂಗಿಯ ಗಂಡನನ್ನು ಸಾಯಿಸುವುದು ಬೇಡವೆಂದು ಯುಧಿಷ್ಠಿರನು ಕೇವಲ ಜಯದ್ರಥನ ತಲೆ ಬೋಳಿಸಿ ಕಲಿಸಿದ್ದನು. 

ಇಂಥ ಅವಮಾನ ಸಹಿಸಲಾರದೆ ಜಯದ್ರಥನು ಶಿವನ ತಪಸ್ಸು ಮಾಡಿದನು. ಶಿವ ಪ್ರತ್ಯಕ್ಷ ಆದಾಗ ಪಾಂಡವರನ್ನು ಯುದ್ಧದಲ್ಲಿ ಸೋಲಿಸುವ ವರ ಕೇಳಿದನು. ನರ - ನಾರಾಯಣರ ಪ್ರತೀಕವಾದ ಅರ್ಜುನ-ಕೃಷ್ಣರನ್ನು ಸೋಲಿಸುವ ವರ ಕೊಡಲು ಸಾಧ್ಯವಿಲ್ಲ ಎಂದು ಶಿವನು - 'ನೀನು ಮಿಕ್ಕಿದ್ದ ನಾಲ್ಕು ಪಾಂಡವರ ವಿರುದ್ಧ ಯುದ್ಧದ ಒಂದು ದಿನ ಗೆಲ್ಲುತ್ತೀಯ' ಎಂದು ವರ ಕೊಟ್ಟನು . ಶಿವನ ಆ ವರದಿಂದಲೇ ೧೩ನೇ ದಿನ ಜಯದ್ರಥ ಒಬ್ಬನೇ ಮಿಕ್ಕಿದ್ದ ನಾಲ್ಕು ಜನ ಪಾಂಡವರನ್ನು ತಡೆಯಲು ಸಾಧ್ಯವಾಯಿತು. 
---

ಏನಿರಬಹುದು ನೀತಿ ?
೧. ಅರ್ಜುನ ದುಡುಕಿ ಶಪಥ ಮಾಡಿದನು. ಅರ್ಜುನನೇನಾದರೂ ಜಯದ್ರಥನನ್ನು ಸಾಯಿಸಲು ಆಗದೆ ಇದ್ದಿದ್ದರೆ ಅಗ್ನಿ ಪ್ರವೇಶ ಮಾಡಿರುತ್ತಿದ್ದನು. ಆಗ ಪಾಂಡವರು ಗೆಲ್ಲುವುದು ಕಷ್ಟವಾಗಿರುವುದು. ಅದಕ್ಕೆ ದುಡುಕಿ ಮಾತಾಡಬಾರದು. ಯೋಚನೆ ಮಾಡಿ ಮಾತಾಡಿದರೆ ಒಳ್ಳೇದು. 

೨. ಕೆಲವೊಮ್ಮೆ ನಾವು ಗೆಲ್ಲುವ ಮುಂಚೆಯೇ ಗೆದಿದ್ದೀವಿ ಎಂದು ಭ್ರಮೆಯಲ್ಲಿ ಸಂಭ್ರಮಿಸುತ್ತೀವಿ. ಇದು ಜಯದ್ರಥನು ಅಂದು ಮಾಡಿದ ತಪ್ಪು. ಸ್ವಲ್ಪ ಕತ್ತಲಾದ ಮಾತ್ರಕ್ಕೆ ಸೂರ್ಯೋದಯವಾಯಿತು ಎಂದು ಯಾಕೆ ಅಂದುಕೊಂಡನು. ಸೂರ್ಯಾಸ್ಥ ಆಗುವುದು ಕ್ರಮೇಣವಾಗಿ, ದಿಢೀರಂತ ಅಲ್ಲವಲ್ಲ. ಅದಕ್ಕೆ ಗೆಲುವು ಖಚಿತ ಮಾಡುವ ಮುನ್ನ ಸಂಭ್ರಮಿಸುವುದು ಸರಿಯಲ್ಲ. 



Tuesday, June 30, 2020

Stories for kids - 8 - Abhimanyu

ವೀರ ಅಭಿಮನ್ಯು 

ಸುಭದ್ರೆ ಶ್ರೀ ಕೃಷ್ಣನ ತಂಗಿ. ಅರ್ಜುನನ ಹೆಂಡತಿಯು ಹೌದು. ಅರ್ಜುನ ಸುಭದ್ರೆಯರ ಮಗನ ಹೆಸರು ಅಭಿಮನ್ಯು. ಸುಭದ್ರೆ ಗರ್ಭಿಣಿಯಾಗಿದ್ದಾಗ ಕೃಷ್ಣನು ಸುಭದ್ರೆಗೆ ಚಕ್ರವ್ಯೂಹವನ್ನು ಛೇದಿಸುವುದು ಹೇಗೆ ಎಂದು ಕಥೆಯಂತೆ ಹೇಳುತ್ತಿದ್ದನು. ಸ್ವಲ್ಪ ಕೇಳಿದನಂತರ ಸುಭದ್ರೆಗೆ ಕಣ್ಣು ಎಳೆದು ನಿದ್ದೆ ಮಾಡಿಬಿಟ್ಟಳು. ಆದರೆ ಕಥೆಯನ್ನು ಕೇಳುತ್ತಿರುವ ಹಾಗೆ 'ಹೂ..  ಹೂ ..' ಎಂದು ಸದ್ದು ಅವಳ ಹೊಟ್ಟೆಯಿಂದ ಬರುತಿತ್ತು. ಇನ್ನೂ ಜನಿಸದ ಅಭಿಮನ್ಯು ಮಾವನ ಕಥೆ ಕೇಳುತ್ತಿದ್ದನು. ಆದರೆ ನಿದ್ರಿಸುತ್ತಿದ್ದ ತಂಗಿಯನ್ನು ನೋಡಿ ಕೃಷ್ಣ ಚಕ್ರವ್ಯೂಹವನ್ನು ಛೇದಿಸುವ ರಹಸ್ಯ ಹೇಳಿದನು. ಛೇದಿಸಿದಮೇಲೆ ಅದರಿಂದ ಹೊರಗೆ ಬರುವುದು ಹೇಳದೆ ಹೊರಟು ಹೋದನು.  

ಕುರುಕ್ಷೇತ್ರ ಯುದ್ಧ ಆರಂಭವಾದಾಗ ಅಭಿಮನ್ಯುವಿಗೆ ಕೇವಲ ೧೬ ವರ್ಷ. 

ಕುರುಕ್ಷೇತ್ರದ ೧೩ನೇ ದಿನ. ದ್ರೋಣಾಚಾರ್ಯರು ಚಕ್ರವ್ಯೂಹ ರಚಿಸಿದರು. ಚಕ್ರವ್ಯೂಹ ಅಂದರೆ ಸೈನಿಕರು ಮೇಲಿನಿಂದ ನೋಡಕ್ಕೆ ಚಕ್ರಾಕಾರದಲ್ಲಿ ನಿಂತಿರುವರು. ಸಾಮಾನ್ಯ ಚಕ್ರವಲ್ಲ. ಒಳಗೆ ವಿರೋಧಿ ಸೈನ್ಯದವರು ಹೋದರೆ ಹೊರಗೆ ಬರುವುದು ತುಂಬಾ ಕಷ್ಟ. 
ಇಂಥ ಚಕ್ರವ್ಯೂಹದಿಂದ ಪಾಂಡವರ ಸೈನ್ಯವೆಲ್ಲ ನಾಶವಾಗುತಿತ್ತು. ಇಡೀ ಪಾಂಡವರ ಸೈನ್ಯದಲ್ಲಿ ಕೇವಲ ಅರ್ಜುನನಿಗೆ ಚಕ್ರವ್ಯೂಹ ಮುರಿಯುವ ಶಕ್ತಿ ಹಾಗೂ ಜ್ಞಾನ ಇದ್ದಿದ್ದು. ಆದರೆ ಅರ್ಜುನನು ಕುರುಕ್ಷೇತ್ರದಲ್ಲಿ ಬೇರೊಂದು ಕಡೆ ಯುದ್ಧದಲ್ಲಿ ಇದ್ದನು. ಅರ್ಜುನ ಬೆರಲ್ಲಿ ಇರುವಾಗ ದ್ರೋಣಾಚಾರ್ಯರು ಯುಧಿಷ್ಠಿರನನ್ನು ಚಕ್ರವ್ಯೂಹದಿಂದ ಸೆರೆ ಹಿಡಿದು ಯುದ್ಧ ಗೆಲ್ಲುವ ತಂತ್ರ ಮಾಡಿದ್ದರು. 

ಹೀಗಿರುವಾಗ ಅಭಿಮನ್ಯು ಯುಧಿಷ್ಠಿರನಿಗೆ  ಚಕ್ರವ್ಯೂಹ ಪ್ರವೇಶ ಮಾಡುವುದು ತನಗೆ ಗೊತ್ತೆಂದು ಹೇಳಿದನು. 
'ದೊಡ್ಡಪ್ಪ, ನನಗೆ ಚಕ್ರವ್ಯೂಹವನ್ನು ಪ್ರವೇಶಿಸುವುದು ಗೊತ್ತು. ಆದರೆ ಹೊರಗೆ ಬರುವುದು ಗೊತ್ತಿಲ್ಲ' ಎಂದ ಅಭಿಮನ್ಯು. 
'ಕುಮಾರ, ಹೆದರಬೇಡ. ನೀನು ಮುಂದೆ ನಡಿದು ಚಕ್ರವ್ಯೂಹ ಪ್ರವೇಶ ಮಾಡು. ನಿನ್ನ ಹಿಂದೆ ಭೀಮಸೇನ, ನಕುಲ, ಸಹದೇವ ಹಾಗು ನಾನು ಬರುತ್ತೀವಿ. ಒಮ್ಮೆ ಒಳಗೆ ಹೋದರೆ ಒಟ್ಟಿಗೆ ಹೊರಗೆ ಬರಬಹುದು' 

ಅಭಿಮನ್ಯು ಚಕ್ರವ್ಯೂಹವನ್ನು ಪ್ರವೇಶ ಮಾಡಿದನು. ಆದರೆ ಅವನ ಹಿಂದೆಯೇ ಬರಬೇಕಿದ್ದ ಭೀಮ, ನಕುಲ, ಸಹದೇವ, ಯುಧಿಷ್ಠಿರರನ್ನು ಜಯದ್ರಥ ತಡೆದನು. ಅಭಿಮನ್ಯು ಚಕ್ರವ್ಯೂಹದ ಒಳಗೆ ಹೋದ ತಕ್ಷಣ ಒಂಟಿ ಆಗಿಬಿಟ್ಟ. 

ಒಳಗೆ ಹೋದರೆ ಅಲ್ಲಿ ದ್ರೋಣ,ಕರ್ಣ, ಕೃಪಾ , ದುರ್ಯೋಧನ, ದುಶ್ಶಾಸನರಂಥ ಮಹಾರಥಿಗಳು. ಯುದ್ಧದಲ್ಲಿ ನಿಯಮ ಎಂದರೆ ಒಬ್ಬ ಯೋದ್ಧನ ಎದುರು ಒಬ್ಬ ಯೋದ್ಧನೆ ಯುದ್ಧ ಮಾಡಬೇಕು. ಆದರೆ ಇಲ್ಲಿ ಅಭಿಮನ್ಯುವಿನ  ವಿರುದ್ಧ ಅಷ್ಟೂ ಮಹಾರಥಿಗಳು ಒಟ್ಟಿಗೆ ಪ್ರಹಾರ ಮಾಡಿದರು. ಕರ್ಣ ಅಭಿಮನ್ಯುವಿನ ಬಿಲ್ಲನ್ನು ಹಾಗೂ ಅವನ ರಥವನ್ನು ಮುರಿದನು. ಆದರೂ ಧೈರ್ಯ ಕಳೆದುಕೊಳ್ಳದೆ ಅಭಿಮನ್ಯು ರಥದ ಚಕ್ರವನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದು ಯುದ್ಧ ಮಾಡಿದನು. ಆದರೆ ಎಲ್ಲ ಕೌವ್ರವರು ಅವನನ್ನು ನಿರ್ದಾಕ್ಷಣ್ಯವಾಗಿ ಕೊಂದರು. 

ಅಭಿಮನ್ಯುವಿನ ಧೈರ್ಯಕ್ಕೆ ಸಾಟಿಯಿಲ್ಲ. 

-- 
ಅಭಿಮನ್ಯುವನ್ನು ಮೋಸದಿಂದ ಕೊಂದ ವಿಷಯ ಅರ್ಜುನನಿಗೆ ತಿಳಿದಾಗ ಅವನು ಜಯದ್ರಥನನ್ನು ಮರು ದಿನವೇ ಕೊಲ್ಲುವ ಶಪಥ ಮಾಡಿದನು. ಕೊಲ್ಲದೆ ಇದ್ದಲ್ಲಿ ಅಗ್ನಿಪ್ರವೇಶ ಮಾಡುವ ಪ್ರಮಾಣ ಮಾಡಿದನು. 
--


ಏನಿರಬಹುದು ನೀತಿ?

೧. ಅರ್ಧ ಜ್ಞಾನ ಹಾನಿಕಾರಕ. ಅಭಿಮನ್ಯುವಿಗೆ ಚಕ್ರವ್ಯೂಹ ಪ್ರವೇಶ ಮಾಡುವುದು ತಿಳಿದಿತ್ತೇ ವಿನಃ ಹೊರಗೆ ಬರುವುದಲ್ಲ. ಪೂರ್ತಿಯಾಗಿ ತಿಳಿದಿದ್ದರೆ ಚಕ್ರವ್ಯೂಹದಿಂದ ಹೊರಗೆ ಬರಲು ಆಗುತಿತ್ತು. ಆದರೆ ಅಭಿಮನ್ಯು ಅಂದು ಚಕ್ರವ್ಯೂಹ ಪ್ರವೇಶ ಮಾಡದೆ ಇದಿದ್ದರೆ ಯುಧಿಷ್ಠಿರನನ್ನು ಸೆರೆ ಹಿಡಿದು ಯುದ್ಧ ಗೆದ್ದಿರುತ್ತಿದ್ದರೇನೊ ಕೌರವರು. 
೨. ಒಬ್ಬ ೧೬ ವರ್ಷದ ಹುಡುಗನನ್ನು ಭರವಸೆ ಕೊಟ್ಟು ಮುಂದೆ ಕಳಿಸಿದ ಯುಧಿಷ್ಠಿರ, ಅಭಿಮನ್ಯುವಿನ ಸಾವಿಗೆ ಕಾರಣನಾದನು. ನಾವು ಎಷ್ಟು ಮಾಡಬಹುದೊ ಅದನ್ನಷ್ಟೇ ಮಾಡುತ್ತೀವಿ ಎಂದು ಹೇಳಿದರೆ ಒಳ್ಳೇದು. ಕೈಯಲ್ಲಿ ಆಗದನ್ನು ಮಾಡುತ್ತೀವಿ ಎಂದು ಆಶ್ವಾಸನೆ ನೀಡುವುದು ಸರಿಯಲ್ಲ ಎನ್ನಬಹುದು. 


Sunday, June 28, 2020

Stories for kids - 7 - Shishupala

ಶಿಶುಪಾಲನ ವಧೆ 

ಶಿಶುಪಾಲ ಹುಟ್ಟಿದಾಗ ಅವನಿಗೆ ಮೂರು ಕಣ್ಣು ನಾಲ್ಕು ಕಯ್ಯಿ ಇತ್ತು. ಧ್ವನಿ ಕತ್ತೆಯ ಕೂಗಿನಂತೆ.  ಇದರಿಂದ ಬೇಜಾರಾಗಿದ್ದ ಅವನ ತಾಯಿ ಶ್ರುತಶ್ರವಳಿಗೆ ಆಕಾಶವಾಣಿಯು ಹೇಳಿತು 'ಈ ಮಗುವನ್ನು ಒಬ್ಬ ಮಹಾಪುರುಷ ಎತ್ತಿಕೊಂಡಾಗ ಎಲ್ಲಾ ಅವಲಕ್ಷಣಗಳು ಸರಿಹೋಗುತ್ತದೆ. ಆದರೆ ಶಿಶುಪಾಲನ ಮೃತ್ಯು ಅವನ ಕಯ್ಯಿಂದಲೇ' 
ತನಗೆ ತಿಳಿದ ಎಲ್ಲಾ ಮಹಾಪುರುಷರು ಸಾಧು ಸಂತರ ಕಯ್ಯಿಗೆ ಮಗುವನ್ನು ಕೊಟ್ಟು ನೋಡುತ್ತಿದ್ದಳು. ಯಾರು ಎತ್ತಿಕೊಂಡರು ಸರಿಹೋಗಲಿಲ್ಲ. ಒಂದು ದಿನ ಅಣ್ಣ ವಸುದೇವನ ಮಗನಾದ ಶ್ರೀ ಕೃಷ್ಣ ಆ ಮಗುವನ್ನು ಎತ್ತಿ ಕೊಂಡನು. ಥಟ್ಟನೆ ಶಿಶುಪಾಲನ ಎಲ್ಲಾ ವಿಚಿತ್ರ ಲಕ್ಷಣಗಳು ಮಾಯವಾಗಿ ಒಂದು ಸಾಮಾನ್ಯ ಮನುಷ್ಯ ಶಿಶುವಿನಂತೆ ಆದನು. ಇದನ್ನು ನೋಡಿ ಶ್ರುತಶ್ರವಳಿಗೆ ಸಂತೋಷವಾಯಿತು. ಆದರೆ ಶಿಶುಪಾಲನ ಮೃತ್ಯು ಕೃಷ್ಣನ ಕೈಯಲ್ಲಿ ಎಂದು ತಿಳಿಯಿತು. ಆಗ ಅವಳು ಕೃಷ್ಣನನ್ನು ಕೇಳಿಕೊಂಡಳು - 'ಕೃಷ್ಣ, ನನ್ನ ಮಗ ಶಿಶುಪಾಲನ ೧೦೦ ತಪ್ಪುಗಳನ್ನು ನೀನು ಕ್ಷಮಿಸುತ್ತೀನಿ ಅಂತ ಪ್ರಮಾಣ ಮಾಡು.'
ಕೃಷ್ಣ ಒಪ್ಪಿಕೊಂಡನು. 

ಎಷ್ಟೋ ವರ್ಷಗಳು ಕಳೆದವು. ಶಿಶುಪಾಲನು ದೊಡ್ಡವನಾದನು. ಯುಧಿಷ್ಠಿರನಿಗೆ ಇಂದ್ರಪ್ರಸ್ಥದ ಪಟ್ಟಾಭಿಷೇಕ ಮಾಡಿದರು. ಯುಧಿಷ್ಠಿರ ರಾಜಸೂಯ ಯಜ್ಞ ಮಾಡಿದ. ರಾಜಸೂಯ ಯಜ್ಞಕ್ಕೆ ಭೀಷ್ಮ, ದ್ರೋಣ, ಕೃಪಾ, ತಮ್ಮಂದಿರಾದ ಕೌರವರು, ಅಂಗರಾಜ ಕರ್ಣ, ಮಾವ ಶಕುನಿ ಹೀಗೆ ಎಲ್ಲಾ ದೊಡ್ಡ ವ್ಯಕ್ತಿಗಳನ್ನು ಕರೆದನು. ಶಿಶುಪಾಲನನ್ನೂ ಕರೆದನು. ರಾಜಸೂಯ ಯಜ್ಞದಲ್ಲಿ ಒಬ್ಬರು ಮುಖ್ಯ ಅತಿಥಿಯಾಗಿರುತ್ತಾರೆ. ಯುಧಿಷ್ಠಿರ ಶ್ರೀ ಕೃಷ್ಣನನ್ನು ಮುಖ್ಯ ಅತಿಥಿಯಾಗಿ ಸಿಂಹಾಸನದ ಮೇಲೆ ಕೂಡಿಸಿದನು. 

ಶಿಶುಪಾಲನ ಕೊನೆ ಹತ್ತಿರ ಬಂದಿತ್ತು ಅಂತ ಕಾಣತ್ತೆ. ತುಂಬಿದ ಸಭೆಯಲ್ಲಿ ಕೋಪದಲ್ಲಿ ಎದ್ದು ಕೃಷ್ಣ ಮುಖ್ಯ ಅತಿಥಿ ಆಗಲು ಅರ್ಹನಲ್ಲ ಎಂದು ಹೇಳಿದನು. ಕೃಷ್ಣನನ್ನು ಅವಮಾನಿಸಲು ಆರಂಭಿಸಿದನು.
 
'ಹಸುಗಳನ್ನು ಕಾಯುವವನು, ಸಿಂಹಾಸನದಮೇಲೆ ಏನು ಮಾಡುತ್ತಿದ್ದಾನೆ?!'

'ಬೆಣ್ಣೆ ಕದಿಯುವವನೂ ಕಳ್ಳನೇ, ಕಳ್ಳನನ್ನ ಹೀಗೆ ಮುಖ್ಯ ಅತಿಥಿಯಾಗಿ ಕೂಡಿಸಿರುವುದು ಇದೇ ಮೊದಲ ಸಾರಿ ಇರಬೇಕು!'

'ಜರಾಸಂಧನನ್ನು ಎದುರಿಸಲು ಆಗದೆ ಓಡಿ ಹೋದ ಹೇಡಿ!'

ಹೀಗೆ ಕೃಷ್ಣನನ್ನು ಅವಮಾನಿಸಿದನು. ಅಣ್ಣ ಬಲರಾಮನಿಗೆ ಮೊದಲೇ ಕೋಪ ಜಾಸ್ತಿ. ಆದರೂ ಕೃಷ್ಣ ಅವನಿಗೆ ಸುಮ್ಮನಿರಲು ಹೇಳಿ ಶಿಶುಪಾಲನಿಗೆ ಮುಂದು ವರೆಯಲು ಹೇಳಿದ. ಕೃಷ್ಣ ಕೈಯಲ್ಲಿ ಒಂದು ಅಡಿಕೆ ತಟ್ಟೆ ಇಟ್ಟುಕೊಂಡಿದ್ದನು. ತನಗೆ ಆಗುತ್ತಿದೆ ಅವಮಾನಗಳನ್ನು  ಅಡಿಕೆಗಳ ಮೂಲಕ ಲೆಕ್ಕ ಹಾಕುತ್ತಿದ್ದನು. ಪ್ರತಿಯೊಂದು ಅವಮಾನಕ್ಕೂ ಒಂದು ಅಡಿಕೆಯಂತೆ ಒಂದು ಸಣ್ಣ ಗುಡ್ಡೆಗೆ ಹಾಕುತ್ತಿದ್ದನು. ೧೦೦ ಅವಮಾನಗಳು ಆದಾಗ, ಕೃಷ್ಣ ಎಚ್ಚರಿಕೆ ನೀಡಿದನು. 
'ಶಿಶುಪಾಲ, ಅತ್ತೆ ಶ್ರುತಶ್ರವಳಿಗೆ ಮಾತು ಕೊಟ್ಟಂತೆ ನಿನ್ನ ೧೦೦ ತಪ್ಪುಗಳನ್ನು ಕ್ಷಮಿಸಿದ್ದೀನಿ. ಇನ್ನು ಒಂದೂ ತಪ್ಪು ಕ್ಷಮಿಸುವುದಿಲ್ಲ ನಾನು. '

ಆದರೆ ಶಿಶುಪಾಲ ನಿಲ್ಲಲಿಲ್ಲ.
  
'ಹೋಗೋ ಹೇಡಿ! ಹೆಂಗಸರ ವಸ್ತ್ರ ಕದಿಯುತ್ತಿದ್ದ ನೀನು ನನಗೆ ಎಚ್ಚರಿಕೆ ಕೊಡ್ತೀಯಾ?!'

ಅದು ಶಿಶುಪಾಲನ ೧೦೧ನೇ ತಪ್ಪು. ಶ್ರೀ ಕೃಷ್ಣನು ನಿಂತುಕೊಂಡು ತನ್ನ ಸುಧರ್ಶನ ಚಕ್ರದಿಂದ ಶಿಷ್ಪಲನ ತಲೆ ಕತ್ತರಿಸಿದನು. 

ವಾಸ್ತವಿಕವಾಗಿ, ಶಿಶುಪಾಲ ಮಹಾವಿಷ್ಣುವಿನ ದ್ವಾರಪಾಲನಾದ 'ಜಯ'ನು. ಒಂದು ಋಷಿಯ ಶಾಪದಿಂದ ಜಯ-ವಿಜಯರು ಮೂರುಸಾರಿ ಭೂಲೋಕದಲ್ಲಿ ವಿಷ್ಣುವಿನ ವೈರಿಗಳಾಗಿ ಜನಿಸಿದ್ದರು. ಮೊದಲು ಹಿರಣ್ಯಕಶ್ಯಪು-ಹಿರಣ್ಯಾಕ್ಷರಾಗಿ, ಎರಡನೇ ಸಾರಿ ರಾವಣ-ಕುಂಭಕರ್ಣರಾಗಿ   ಮೂರನೇ ಹಾಗೂ ಕೊನೆಯ ಸಾರಿ ಶಿಶುಪಾಲ-ದಂತವಕ್ರರಾಗಿ. 

ಕೃಷ್ಣ ಸುದರ್ಶನ ಚಕ್ರ ಬಿಟ್ಟಾಗ ತನ್ನ ಬೆರಳನ್ನು ಸ್ವಲ್ಪ ಗಾಯ ಮಾಡಿಕೊಂಡನು. ಬೆರಳಿನಿಂದ ರಕ್ತ ಬರಲು ಶುರುವಾಯಿತು. ಸಭೆಯಲ್ಲೇ ಇದ್ದ ದ್ರೌಪದಿಯೂ ತನ್ನ ಸೆರಗಿನಿಂದ ಒಂದು ಸಣ್ಣ ತುಂಡು ಬಟ್ಟೆ ಹರಿದು ಬೆರಳಿಗೆ ಕಟ್ಟಿದಳು. 
ಭಾವುಕನಾಗಿ ಕೃಷ್ಣ - 'ಕೃಷ್ಣೆ! ನೀನು ನನ್ನ ಗಾಯಕ್ಕೆ ಹೀಗೆ ಬಟ್ಟೆ ಕಟ್ಟಿ ನನ್ನನ್ನು ನಿನ್ನ ಋಣಿಯಾಗಿಸಿಬಿಟ್ಟೆ. ತಂಗಿ, ನಿನ್ನ ಈ ಋಣ ಮುಂದೆ ತೀರಿಸುತ್ತೀನಿ.'  ಎಂದನು. 

ಹೀಗೆ ಮುಗಿಯಿತು ಶಿಶುಪಾಲನ ಕಥೆ. 

ಏನಿರಬಹುದು ನೀತಿ -

೧.  'ಲಲಾಟ ಲಿಖಿತ ರೇಖಾ ಪರಿಮಾರ್ಶ್ತುಂ ನಾ ಶಕ್ಯತೇ ' - ಅಂದರೆ ಹಣೆಯಲ್ಲಿ ಬರೆದಿರುವುದನ್ನು ಪರಿವರ್ತಿಸಲು ಸಾಧ್ಯವಿಲ್ಲ. ಶಿಶುಪಾಲನಿಗೆ ಗೊತ್ತಿತ್ತು ಕೃಷ್ಣನ ಕಯ್ಯಲ್ಲಿಯೇ ತನ್ನ ಸಾವು ಅಂತ ಆದರೂ ಅವನು ಸುಮ್ಮನಿರಲಿಲ್ಲ.
೨. ನಾವು ಮಾಡುವ ಒಳ್ಳೆ ಕರ್ಮಗಳು ನಮಗೆ ಮುಂದೆ ಸಹಾಯ ಮಾಡುತ್ತವೆ. ದ್ರೌಪದಿ ಕೃಷ್ಣನ ಬೆರಳಿಗೆ ಬಟ್ಟೆ ಕಟ್ಟಿದಾಗ ಅವಳಿಗೆ ಮುಂದೆ ಅವಳ ಸಹಾಯಕ್ಕೆ ಕೃಷ್ಣ ಬರುವನು ಎಂದು ತಿಳಿದಿರಲಿಲ್ಲ. ಕೇವಲ ಅಣ್ಣನಂಥ ಕೃಷ್ಣನಿಗೆ ಸಹಾಯ ಮಾಡುವುದೊಂದೇ ಅವಳಮನಸ್ಸಿನಲ್ಲಿ ಇತ್ತು.