ಕುಂತಿಗೆ ದುರ್ವಾಸ ಮುನಿ ಒಂದು ವರ ನೀಡಿದ್ದರು. ವರ ಏನೆಂದರೆ ಕುಂತಿ ಯಾವುದೇ ದೇವರನ್ನು ಕೇಳಿಕೊಂಡರೂ ಅವರಿಂದ ಒಂದು ಮಗು ಆಗುವುದು. ಮದುವೆಯ ಮುಂಚೆ ಸಿಕ್ಕ ಈ ವರದ ಮೇಲೆ ಕುಂತಿಗೆ ಕುತೂಹಲ. ಹಾಗಾಗಿ ಸೂರ್ಯ ದೇವರನ್ನು ಮಗು ಬೇಕೆಂದು ಕೇಳಿಕೊಂಡಳು. ದೂರ್ವಾಸ ಮುನಿಗಳು ಹೇಳಿದಂತೆಯೇ ಅವಳಿಗೆ ಸೂರ್ಯ ದೇವರಿಂದ ಒಂದು ಮಗು ಸಿಕ್ಕಿತು. ಆ ಮಗು ಹುಟ್ಟಿದ್ದಾಗಲೇ ಕಿವಿಯಲ್ಲಿ ಕುಂಡಲಗಳು ಹಾಗೂ ಮೈಗೆ ಕವಚ ಧರಿಸಿಕೊಂಡಿತ್ತು. ಸೂರ್ಯನಂತೆಯೇ ತೇಜಸ್ವಿ ಮಗು. ಆದರೆ ಇನ್ನೂ ಮದುವೆಯಾಗದೆಯೇ ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂದು ಕುಂತಿ ಭಯ ಪಟ್ಟಳು. ಭಯದಲ್ಲಿ ಮಗುವನ್ನು ಒಂದು ಬುಟ್ಟಿಯಲ್ಲಿ ಹಾಕಿ ಅದನ್ನು ಗಂಗೆಯಲ್ಲಿ ಬಿಟ್ಟಳು. ಆ ಮಗುವೇ ಕರ್ಣ.
ನದಿಯಲ್ಲಿ ಬುಟ್ಟಿಯಲ್ಲಿ ತೇಲಿಕೊಂಡು ಹೋಗುತ್ತಿದ್ದ ಈ ಮಗುವನ್ನು ಒಬ್ಬ ರಥ ಓಡಿಸುವವನು, ಅಂದರೆ ಸೂತನೊಬ್ಬನು ನೋಡಿದನು. ತನಗೆ ಹೇಗಿದ್ದರೂ ಮಕ್ಕಳಿರಲಿಲ್ಲ. ಆ ಮಗುವನ್ನು ದತ್ತು ತಗೊಂಡನು.
ಹುಟ್ಟುಗುಣ ಸುಟ್ಟರು ಹೋಗುವುದಿಲ್ಲ. ಕರ್ಣನಿಗೆ ಧನುರ್ವಿದ್ಯೆಯಲ್ಲಿ ಆಸಕ್ತಿ ಮೂಡಿತು. ಕಲಿಯಲೆಂದು ಪರಶುರಾಮರ ಹತ್ತಿರ ಹೋದನು. ಪರಶುರಾಮರು ಬ್ರಾಹ್ಮಣರಿಗೆ ಬಿಟ್ಟು ಇನ್ನು ಯಾರಿಗೆ ಹೇಳಿಕೊಡುತ್ತಿರಲಿಲ್ಲ. ಕ್ಷತ್ರಿಯರೆಂದರೆ ಅವರಿಗೆ ಆಗದು. ಇದು ತಿಳಿದಿದ್ದ ಕರ್ಣ ಅವರ ಶಿಷ್ಯನಾಗಬೇಕೆಂದು ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿದನು. ಧನುರ್ವಿದ್ಯೆಯಲ್ಲಿ ಕರ್ಣನನ್ನು ಮೀರಿಸುವವರು ಇಲ್ಲ ಎನ್ನುವಷ್ಟು ಚೆನ್ನಾಗಿ ಪರಶುರಾಮರ ಹತ್ತಿರ ಕಲಿತನು.
ಇಂದ್ರನಿಗೆ ತನ್ನ ಮಗನಾದ ಅರ್ಜುನನೇ ಸರ್ವಶ್ರೇಷ್ಠ ಧನುರ್ಧಾರಿ ಆಗಬೇಕು ಎಂದಿತ್ತು. ಒಂದು ಮಧ್ಯಾಹ್ನ ಗುರು ಪರಶುರಾಮರು ಕರ್ಣನ ತೊಡೆಯಮೇಲೆ ಮಲಗಿದ್ದರು. ಕರ್ಣ ಬ್ರಾಹ್ಮಣ ಅಲ್ಲ ಎನ್ನುವ ಬಣ್ಣ ಬಯಲು ಮಾಡಬೇಕೆಂದು ಇಂದ್ರನು ಒಂದು ಕಾಗೆಯ ರೂಪದಲ್ಲಿ ಬಂದನು. ಕರ್ಣನ ತೊಡೆ ಕುಕ್ಕಲು ಆರಂಭಿಸಿದನು. ಎಷ್ಟು ಓಡಿಸಲು ಪ್ರಯತ್ನಿಸಿದರೂ ಆ ಕಾಗೆ ಮತ್ತೆ ಮತ್ತೆ ಬಂದು ಕರ್ಣನ ತೊಡೆ ಕುಕ್ಕುತಿತ್ತು. ಎಷ್ಟೇ ಕಷ್ಟ ಆದರೂ ಗುರುಗಳ ನಿದ್ದೆ ಹಾಳಾಗಬಾರದೆಂದು ಕರ್ಣನು ನೋವ್ವನ್ನು ಸದ್ದಿಲ್ಲದೆ ಅನುಭವಿಸಿದನು. ಕರ್ಣನ ತೊಡೆಯಿಂದ ರಕ್ತ ಬರಲು ಆರಂಭಿಸಿತು. ಆ ಬಿಸಿ ರಕ್ತ ಗುರು ಪರಶುರಾಮರ ಕೆನ್ನೆಗೆ ಸೋಕಿ ಅವರು ಎಚ್ಚರಗೊಂಡರು.
'ಒಬ್ಬ ಬ್ರಾಹ್ಮಣನಿಗೆ ನೋವ್ವು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ನಿಜ ಹೇಳು, ನೀನು ಯಾರು?!' ಎಂದು ಕೋಪದಿಂದ ಕೇಳಿದರು.
'ಗುರುಗಳೇ, ನನಗೆ ನನ್ನ ಜನ್ಮ ಕೊಟ್ಟ ತಂದೆ ತಾಯಿ ಯಾರೆಂದು ತಿಳಿದಿಲ್ಲ. ನನ್ನ ಸಾಕಿದ ತಂದೆ ಒಬ್ಬ ಸಾರಥಿ. ' ಎಂದ ಕರ್ಣ.
'ನೀನು ಖಂಡಿತವಾಗಿಯೂ ಕ್ಷತ್ರಿಯನೇ ಆಗಿರಬೇಕು. ಕ್ಷತ್ರಿಯರೆಂದರೆ ನನಗೆ ಎಷ್ಟು ದ್ವೇಷ ಅಂತ ಗೊತ್ತಿಲ್ಲವಾ?!' ಎಂದು ಗರ್ಜಿಸಿದನು ಪರಶುರಾಮ.
'ಸುಳ್ಳು ಹೇಳಿ ನೀನು ನನ್ನಿಂದ ಕಲಿತ ವಿದ್ಯೆಯೆಲ್ಲ ನಿನಗೆ ಯಾವಾಗ ಅತಿ ಹೆಚ್ಚು ಬೇಕಾಗಿರುತ್ತದೆಯೋ ಆಗ ಮರೆತು ಹೋಗುತ್ತೀಯಾ!' ಎಂದು ಶಾಪ ಕೊಟ್ಟನು ಪರಶುರಾಮ.
ಎಷ್ಟೋ ವರ್ಷಗಳ ನಂತರ ಕುರುಕ್ಷೇತ್ರ ಯುದ್ಧದಲ್ಲಿ, ಅರ್ಜುನನನ್ನೇ ತನ್ನ ಗುರಿಯಾಗಿ ಮಾಡಿಕೊಂಡಿದ್ದ ಕರ್ಣ ಅವನೆದುರು ಬಂದಾಗ ಕಲಿತ ವಿದ್ಯೆಯೆಲ್ಲ ಮರೆತು ಹೋದನು.!
ದ್ರೋಣಾಚಾರ್ಯರಿಂದ ವಿದ್ಯಾಭ್ಯಾಸ ಪಡೆದು ಪಾಂಡವರು, ಕೌರವರು ಅವರವರು ಕಲಿತ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದರು. ಅರ್ಜುನನು ಧನುರ್ವಿದ್ಯೆಯಿಂದ ಎಲ್ಲರನ್ನು ಮೂಕವಿಸ್ಮಿತ ಮಾಡಿದನು. ಇದನ್ನು ದೂರದಿಂದ ನೋಡುತಿದ್ದ ಕರ್ಣನು, 'ಅರ್ಜುನ ಮಾಡಿದ್ದೆಲ್ಲವನ್ನು ನಾನು ಮಾಡಬಲ್ಲೆ. ಅವನಿಗಿಂತ ಚೆನ್ನಾಗಿ ಮಾಡಬಲ್ಲೆ!' ಎಂದು ಕೂಗಿದನು.
'ನೀನು ಯಾರು? ನಿನ್ನ ಪರಿಚಯ ಏನು?' ಎಂದು ಭೀಷ್ಮಾಚಾರ್ಯರು ಕೇಳಿದರು.
'ನನ್ನ ಹೆಸರು ಕರ್ಣ. ನಾನು ಧನುರ್ವಿದ್ಯೆಯಲ್ಲಿ ಪರಿಣಿತನು. ನಾನು ಒಬ್ಬ ಸೂತಪುತ್ರ. ' ಎಂದ ಕರ್ಣ.
'ಇದು ಕ್ಷತ್ರಿಯರ ವಿದ್ಯೆ, ಕ್ಷತ್ರಿಯರಲ್ಲೆದೆ ಬೇರೆಯವರಿಗೆ ಅನುಮತಿ ಇಲ್ಲ' ಎಂದರು ಭೀಷ್ಮಾಚಾರ್ಯರು.
ಇದನ್ನು ನೋಡುತ್ತಿದ್ದ ದುರ್ಯೋಧನನು, ಕರ್ಣನ ಆತ್ಮವಿಶ್ವಾಸ ನೋಡಿ ಅವನು ನಿಜವಾಗಿಯೂ ಒಳ್ಳೆಯ ಧನುರ್ಧಾರಿಯಾಗಿರಬೇಕೆಂದು ಗುರುತಿಸಿದನು. ಅದೇ ಕ್ಷಣದಲ್ಲಿಯೇ ಅವನನ್ನು ಅಂಗ ದೇಶದ ರಾಜ ಎಂದು ಘೋಷಿಸಿದನು.
ಆದರೂ ಭೀಷ್ಮಾಚಾರ್ಯರು ಕರ್ಣನ ಧನುರ್ವಿದ್ಯೆ ಪ್ರದರ್ಶನಕ್ಕೆ ಅನುಮತಿ ನೀಡಲಿಲ್ಲ.
ರಾಜಮನೆತನವೆಲ್ಲ ಅವನ ವಿರುದ್ಧ ಇರುವಾಗ ದುರ್ಯೋಧನನೊಬ್ಬನೇ ಕರ್ಣನ ಪರ ಇದ್ದಿದ್ದು. ಅಂದಿಂದ ಕರ್ಣ ದುರ್ಯೋಧನರು ಮಿತ್ರರಾದರು. ಕರ್ಣನಿಗೆ ದುರ್ಯೋಧನನೆಂದರೆ ಪ್ರಾಣ. ದುರ್ಯೋಧನ ಸರಿ ಮಾಡಲಿ, ತಪ್ಪಿ ಮಾಡಲಿ ಅವನ ಪರವೇ. ಹೀಗಾಗಿ ಕುರುಕ್ಷೇತ್ರದಲ್ಲಿ ದುರ್ಯೋಧನನು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿದರೂ ಸಹ ಅವನು ದುರ್ಯೋಧನನ ಜೊತೆ ಬಿಡಲಿಲ್ಲ.
ಕರ್ಣನದು ಒಂದು ದುರಂತ ಕಥೆ. ಒಂದಾದಮೇಲೊಂದು ಕಷ್ಟಗಳು ಅವನ ಎದುರಾದವು. ಸರಿ ಯಾವುದು ತಪ್ಪು ಯಾವುದು ಎಂದು ತಿಳಿದರೂ ಕೂಡ ದುರ್ಯೋಧನನ ಋಣ ತೀರಿಸಬೇಕೆಂದು ಅವನು ದುರ್ಯೋಧನನ ಕಯ್ಯಿ ಬಿಡಲಿಲ್ಲ. ಕುರುಕ್ಷೇತ್ರ ಯುದ್ಧ ಆಗುವುದು ನಿಶ್ಚಯವಾದಾಗ ಕೃಷ್ಣ ಕರ್ಣನನ್ನು ಭೇಟಿ ಆದನು. ಕೃಷ್ಣ ಕರ್ಣನ ಜನ್ಮರಹಸ್ಯವನ್ನು ಹೇಳಿದನು.
' ಕರ್ಣ, ನೀನೆ ಜ್ಯೇಷ್ಠ ಪಾಂಡು ಪುತ್ರ. ಈ ವಿಷಯ ಎಲ್ಲರಿಗೂ ಹೇಳಿದರೆ ಯುದ್ಧ ತಡೆಯಬಹುದು. ಯುಧಿಷ್ಠಿರ ನೀನು ಅಣ್ಣ ಎಂದು ತಿಳಿದರೆ ಇಂದಿಗೂ ರಾಜನಾಗಲು ಒಪ್ಪುವುದಿಲ್ಲ. ದುರ್ಯೋಧನ ಹೇಗಿದ್ದರೂ ನಿನ್ನ ಗೆಳೆಯ. ಅವನಿಗೇನು ಅಭ್ಯಂತರ ಇರಲು ಸಾಧ್ಯ ಇಲ್ಲ.' ಎಂದು ಹೇಳಿದನು ಕೃಷ್ಣ.
ಆದರೆ ಕರ್ಣ ಒಪ್ಪಲಿಲ್ಲ.
'ಕೃಷ್ಣ, ನಾನೇನಾದರೂ ರಾಜನಾದರೆ ನನ್ನ ಪ್ರಿಯ ಮಿತ್ರ ದುರ್ಯೋಧನನಿಗೆ ರಾಜ್ಯವನ್ನು ಕೊಟ್ಟಿ ಬಿಡುತ್ತೀನಿ. ಆದರೆ ಅದು ಅಧರ್ಮ ಎಂದು ನನಗೆ ಗೊತ್ತು. ಅದರಿಂದ ನನ್ನ ಜನ್ಮ ರಹಸ್ಯ ರಹಸ್ಯವಾಗಿಯೇ ಇರಲಿ. ನಾನು ದುರ್ಯೋಧನನ ಪರವೇ ಯುದ್ಧ ಮಾಡುತ್ತೀನಿ.' ಎಂದ ಕರ್ಣ.
ಕೃಷ್ಣನು ಬೇಕಂತಲೇ ಅಷ್ಟು ದಿನ ರಹಸ್ಯ ಹೇಳದೆ ಯುದ್ಧದ ಕೆಲವೇ ದಿನಗಳ ಮುಂಚೆ ಹೇಳಿದನು. ಕರ್ಣನ ಮನೋಬಲ ಕಮ್ಮಿ ಮಾಡುವುದೇ ಅವನ ಉದ್ದೇಶವಾಗಿತ್ತು.
ಇನ್ನೂ ಸ್ವಲ್ಪ ವಿಷಯಗಳಿವೆ ಕರ್ಣನ ಕಥೆಯಲ್ಲಿ , ಮುಂದಿನ ಭಾಗದಲ್ಲಿ ನೋಡೋಣ.
ಏನಿರಬಹುದು ನೀತಿ?
೧. ಕೆಟ್ಟವರ ಸಹವಾಸ ಹಾಗು ಅವರ ಉಪಕಾರದಿಂದ ದೂರ ಇರುವುದೇ ಉತ್ತಮ. ಕರ್ಣನೇನಾದರೂ ದುರ್ಯೋಧನನ ಮಿತ್ರನಾಗಿಲ್ಲದೆ ಇದ್ದಿದ್ದರೆ, ಮಹಾಭಾರತದ ಕಥೆಯೇ ಬೇರೆಯಾಗಿರುತ್ತಿತ್ತು! ಅದಕ್ಕೆ ಒಳ್ಳೆಯವರೊಂದಿಗೆ ನಾವು ಸ್ನೇಹ ಬೆಳೆಸುವುದು ಒಳ್ಳೇದು.
೨. ಕೇವಲ ಸರಿಯಾದ ದಾರಿ ಏನೆಂದು ಅರಿತಿರೆ ಸಾಲದು. ಸರಿಯಾದ ದಾರಿಯಲ್ಲಿ ನಡಿಯಬೇಕು ಕೂಡ. ದುರ್ಯೋಧನ ಮಾಡುತಿದ್ದ ಎಲ್ಲ ತಪ್ಪುಗಳನ್ನು ಕರ್ಣ ಗುರುತಿಸುತ್ತಿದನು ಆದರೂ ಅದರಲ್ಲಿ ಭಾಗಿ ಆದನೆ ವಿನಃ ದುರ್ಯೋಧನನನ್ನು ತಿದ್ದಲು ಪ್ರಯತ್ನಿಸಲಿಲ್ಲ. ಅವನ ಜೊತೆ ಸೇರಿ ಕರ್ಣನೂ ಆ ತಪ್ಪುಗಳನ್ನು ಮಾಡಿದನು.
No comments:
Post a Comment