೧೦೦ ಜನ ಕೌರವರಿಗೆ ಒಬ್ಬಳೇ ತಂಗಿ. ಅವಳು ದುಶ್ಶಲೆ . ಅವಳ ಗಂಡ ಸಿಂಧು ರಾಜ್ಯದ ರಾಜ ಜಯದ್ರಥನು.
ಕುರುಕ್ಷೇತ್ರದ ೧೩ನೇ ದಿನ ಕೌರವರು ಅನ್ಯಾಯವಾಗಿ ಅಭಿಮನ್ಯುವನ್ನು ಕೊಂದರು . ಅಭಿಮನ್ಯುವಿನ ಜೊತೆ ಯುಧಿಷ್ಠಿರ, ಭೀಮ, ನಕುಲ, ಸಹದೇವರು ಚಕ್ರವ್ಯೂಹವನ್ನು ಪ್ರವೇಶಿಸುವದನ್ನು ಜಯದ್ರಥನು ತಡೆದನು.
ಮಗನ ಸಾವಿಗೆ ಕಾರಣನಾದ ಜಯದ್ರಥನನ್ನು ಮರುದಿನದ ಸೂರ್ಯಾಸ್ಥ ಆಗುವ ಮುಂಚೆ ಕೊಲ್ಲುತ್ತೀನಿ ಎಂದು ಅರ್ಜುನನು ಶಪಥ ಮಾಡಿದನು. ಕೊಲ್ಲದಿದ್ದಲ್ಲಿ ಅಗ್ನಿ ಪ್ರವೇಶ ಮಾಡುತ್ತೀನಿ ಎಂದು ಕೂಡ ಶಪಥ ಮಾಡಿದನು.
ಈ ವಿಷಯ ತಿಳಿದ ಕೌರವರು ಏನಾದರೂ ಮಾಡಿ ಜಯದ್ರಥನನ್ನು ಆ ಒಂದು ದಿನ ಕಾಪಾಡಲೇ ಬೇಕು ಎಂದು ನಿಶ್ಚಯ ಮಾಡಿದರು.
೧೪ನೇ ದಿನ. ಸಮಸ್ತ ಕುರು ಸೇನೆ ಅರ್ಜುನನನ್ನು ಜಯದ್ರಥನಿಂದ ಆದಷ್ಟು ದೂರ ಇಟ್ಟರು. ಒಂದು ಕಮಲ ವ್ಯೂಹವನ್ನು ರಚಿಸಿ ಅರ್ಜುನನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅಂದು ಅರ್ಜುನನ ಬಾಣಗಳನ್ನು ಎದುರಿಸುವುದು ಅಸಾಧ್ಯ ಎನ್ನುವಂತಿತ್ತು.
ದ್ರೋಣಾಚಾರ್ಯರು ಎದುರಾದಾಗ ಅರ್ಜುನ ಅವರೊಂದಿಗೆ ಯುದ್ಧ ಮಾಡದಿರುವ ಅನುಮತಿ ತಗೊಂಡು ಮುಂದು ವರೆದನು. ಅರ್ಜುನನ ದಾರಿಯಲ್ಲಿ ದುರ್ಯೋಧನ ಬಂದನು. ದುರ್ಯೋಧನನನ್ನು ಮೂರ್ಛೆ ತಪ್ಪುವ ಹಾಗೆ ಮಾಡಿದ ಅರ್ಜುನ. ಹೀಗೆ ಅರ್ಜುನನ ರಥ ಬಂದು ಕೊನೆಗೂ ಜಯದ್ರಥನ ರಥದ ಎದುರಿಗೆ ಬಂದು ನಿಂತಿತು. ಆದರೂ ಕುರು ಸೇನೆ ಮತ್ತೆ ಮಧ್ಯ ಬಂದು ಅರ್ಜುನನಿಗೆ ಜಯದ್ರಥನೊಂದಿಗೆ ಯುದ್ಧ ಮಾಡಲು ಬಿಡಲಿಲ್ಲ.
ಹೀಗೇ ನಡಿಯುತ್ತಿದ್ದರೆ ಸೂರ್ಯಾಸ್ಥ ಆಗುವ ಮುನ್ನ ಜಯದ್ರಥನನ್ನು ಸಾಯಿಸುವುದು ಸಾಧ್ಯ ಇಲ್ಲ ಎಂದು ಕೃಷ್ಣನಿಗೆ ಅರ್ಥ ಆಯಿತು. ಯಾರಿಗೂ ತಿಳಿಯದ ಹಾಗೆ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡವಾಗಿ ಇಟ್ಟ ಕೃಷ್ಣ. ಸುದರ್ಶನ ಚಕ್ರ ಅಡ್ಡ ಬಂದಾಗ ತಕ್ಷಣ ಕತ್ತಲೆ ಆಯಿತು. ಕೌರವರೆಲ್ಲ ಸಂಭ್ರಮ ಪಟ್ಟರು. ಕುರು ಸೇನೆಯ ಹಿಂದೆ ಇದ್ದ ಜಯದ್ರಥ ಮುಂದೆ ಬಂದು ಅರ್ಜುನನನ್ನು ಗೇಲಿ ಮಾಡಲು ಆರಂಭಿಸಿದ. ಅರ್ಜುನನು ಇನ್ನ ಅಗ್ನಿ ಪ್ರವೇಶ ಮಾಡುವುದು ತಪ್ಪಲ್ಲ ಎಂದು ಎಲ್ಲರು ಅಂದು ಕೊಂಡರು. ಆವಾಗ ಕೃಷ್ಣ ಸೂರ್ಯನಿಗೆ ಅಡ್ಡ ಇದ್ದ ತನ್ನ ಸುದರ್ಶನ ಚಕ್ರವನ್ನು ತೆಗೆದನು. ಆಗ ಸೂರ್ಯಾಸ್ಥ ಆಗಿಲ್ಲ ಎನ್ನುವುದು ಎಲ್ಲರಿಗೂ ಸ್ಪಷ್ಠ ಆಯಿತು. ಭಯದಿಂದ ಜಯದ್ರಥ ಓಡಲು ಆರಂಭಿಸಿದನು. ಆವಾಗ ಅರ್ಜುನ ಬಾಣ ಬಿಟ್ಟು ಜಯದ್ರಥನ ತಲೆ ಕತ್ತರಿಸಿದನು.
ಜಯದ್ರಥನಿಗೆ ಅವನ ತಂದೆ ವ್ರಿಧಾಕ್ಷತ್ರನಿಂದ ಒಂದು ವರ ಇತ್ತು. ವರ ಏನೆಂದರೆ - ಯಾರು ಜಯದ್ರಥನ ತಲೆ ನೆಲಕ್ಕೆ ಬೀಳುವಹಾಗೆ ಮಾಡುತ್ತಾರೆಯೋ ಅವರ ತಲೆಯಲ್ಲಿ ಮರುಕ್ಷಣವೇ ಒಂದು ವಿಸ್ಫೋಟವಾಗಿ ಅವರು ಸಾಯುತ್ತಾರೆ.
ಹಾಗಾಗಿ ಅರ್ಜುನ ಜಯದ್ರಥನ ತಲೆ ಕತ್ತರಿಸಿದಾಗ ಬಾಣ ಹೇಗೆ ಬಿಟ್ಟನೆಂದರೆ ಜಯದ್ರಥನ ತಲೆ ನೆಲಕ್ಕೆ ಬೀಳಲಿಲ್ಲ. ಹಾರಿ ಹೋಗಿ ಅವನ ತಂದೆ ಋಷಿ ವ್ರಿಧಾಕ್ಷತ್ರನ ಮಡಿಲಲ್ಲಿ ಹೋಗಿ ಬಿತ್ತು . ಗಾಬರಿಯಿಂದ ವ್ರಿಧಾಕ್ಷತ್ರನು ಎದ್ದು ನಿಂತನು. ನಿಂತ ತಕ್ಷಣ ಜಯದ್ರಥನ ತಲೆ ನೆಲದ ಮೇಲೆ ಬಿತ್ತು. ಆವಾಗ ವ್ರಿಧಾಕ್ಷತ್ರನ ತಲೆಯಲ್ಲಿ ಒಂದು ವಿಸ್ಫೋಟ ಆಗಿ ಅವನು ಸತ್ತನು.
ಹೀಗೆ ಮುಗೀತು ಜಯದ್ರಥನ ಕಥೆ.
---
ಆ ದಿನ ಕೃಷ್ಣ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡ ಹಾಕಲಿಲ್ಲ, ಸೂರ್ಯಗ್ರಹಣ ಆಗಿತ್ತು ಎಂದು ಕೂಡ ಹೇಳುತ್ತಾರೆ.
ಕುರುಕ್ಷೇತ್ರದ ಈ ಕಥೆಯ ಹಿನ್ನೆಲೆ ಏನಂದರೆ:
ಪಾಂಡವರು ವನವಾಸದಲ್ಲಿದ್ದಾಗ ಜಯದ್ರಥನು ದ್ರೌಪಾದಿಯನ್ನು ಅಪಹರಿಸಲು ಪ್ರಯತ್ನಿಸಿದ್ದನು. ಆದರೆ ಅರ್ಜುನ ಮತ್ತು ಭೀಮ ಅವನನ್ನು ಸೆರೆ ಹಿಡಿದುಬಿಟ್ಟರು. ತಂಗಿಯ ಗಂಡನನ್ನು ಸಾಯಿಸುವುದು ಬೇಡವೆಂದು ಯುಧಿಷ್ಠಿರನು ಕೇವಲ ಜಯದ್ರಥನ ತಲೆ ಬೋಳಿಸಿ ಕಲಿಸಿದ್ದನು.
ಇಂಥ ಅವಮಾನ ಸಹಿಸಲಾರದೆ ಜಯದ್ರಥನು ಶಿವನ ತಪಸ್ಸು ಮಾಡಿದನು. ಶಿವ ಪ್ರತ್ಯಕ್ಷ ಆದಾಗ ಪಾಂಡವರನ್ನು ಯುದ್ಧದಲ್ಲಿ ಸೋಲಿಸುವ ವರ ಕೇಳಿದನು. ನರ - ನಾರಾಯಣರ ಪ್ರತೀಕವಾದ ಅರ್ಜುನ-ಕೃಷ್ಣರನ್ನು ಸೋಲಿಸುವ ವರ ಕೊಡಲು ಸಾಧ್ಯವಿಲ್ಲ ಎಂದು ಶಿವನು - 'ನೀನು ಮಿಕ್ಕಿದ್ದ ನಾಲ್ಕು ಪಾಂಡವರ ವಿರುದ್ಧ ಯುದ್ಧದ ಒಂದು ದಿನ ಗೆಲ್ಲುತ್ತೀಯ' ಎಂದು ವರ ಕೊಟ್ಟನು . ಶಿವನ ಆ ವರದಿಂದಲೇ ೧೩ನೇ ದಿನ ಜಯದ್ರಥ ಒಬ್ಬನೇ ಮಿಕ್ಕಿದ್ದ ನಾಲ್ಕು ಜನ ಪಾಂಡವರನ್ನು ತಡೆಯಲು ಸಾಧ್ಯವಾಯಿತು.
---
ಏನಿರಬಹುದು ನೀತಿ ?
೧. ಅರ್ಜುನ ದುಡುಕಿ ಶಪಥ ಮಾಡಿದನು. ಅರ್ಜುನನೇನಾದರೂ ಜಯದ್ರಥನನ್ನು ಸಾಯಿಸಲು ಆಗದೆ ಇದ್ದಿದ್ದರೆ ಅಗ್ನಿ ಪ್ರವೇಶ ಮಾಡಿರುತ್ತಿದ್ದನು. ಆಗ ಪಾಂಡವರು ಗೆಲ್ಲುವುದು ಕಷ್ಟವಾಗಿರುವುದು. ಅದಕ್ಕೆ ದುಡುಕಿ ಮಾತಾಡಬಾರದು. ಯೋಚನೆ ಮಾಡಿ ಮಾತಾಡಿದರೆ ಒಳ್ಳೇದು.
೨. ಕೆಲವೊಮ್ಮೆ ನಾವು ಗೆಲ್ಲುವ ಮುಂಚೆಯೇ ಗೆದಿದ್ದೀವಿ ಎಂದು ಭ್ರಮೆಯಲ್ಲಿ ಸಂಭ್ರಮಿಸುತ್ತೀವಿ. ಇದು ಜಯದ್ರಥನು ಅಂದು ಮಾಡಿದ ತಪ್ಪು. ಸ್ವಲ್ಪ ಕತ್ತಲಾದ ಮಾತ್ರಕ್ಕೆ ಸೂರ್ಯೋದಯವಾಯಿತು ಎಂದು ಯಾಕೆ ಅಂದುಕೊಂಡನು. ಸೂರ್ಯಾಸ್ಥ ಆಗುವುದು ಕ್ರಮೇಣವಾಗಿ, ದಿಢೀರಂತ ಅಲ್ಲವಲ್ಲ. ಅದಕ್ಕೆ ಗೆಲುವು ಖಚಿತ ಮಾಡುವ ಮುನ್ನ ಸಂಭ್ರಮಿಸುವುದು ಸರಿಯಲ್ಲ.
No comments:
Post a Comment