Tuesday, June 30, 2020

Stories for kids - 8 - Abhimanyu

ವೀರ ಅಭಿಮನ್ಯು 

ಸುಭದ್ರೆ ಶ್ರೀ ಕೃಷ್ಣನ ತಂಗಿ. ಅರ್ಜುನನ ಹೆಂಡತಿಯು ಹೌದು. ಅರ್ಜುನ ಸುಭದ್ರೆಯರ ಮಗನ ಹೆಸರು ಅಭಿಮನ್ಯು. ಸುಭದ್ರೆ ಗರ್ಭಿಣಿಯಾಗಿದ್ದಾಗ ಕೃಷ್ಣನು ಸುಭದ್ರೆಗೆ ಚಕ್ರವ್ಯೂಹವನ್ನು ಛೇದಿಸುವುದು ಹೇಗೆ ಎಂದು ಕಥೆಯಂತೆ ಹೇಳುತ್ತಿದ್ದನು. ಸ್ವಲ್ಪ ಕೇಳಿದನಂತರ ಸುಭದ್ರೆಗೆ ಕಣ್ಣು ಎಳೆದು ನಿದ್ದೆ ಮಾಡಿಬಿಟ್ಟಳು. ಆದರೆ ಕಥೆಯನ್ನು ಕೇಳುತ್ತಿರುವ ಹಾಗೆ 'ಹೂ..  ಹೂ ..' ಎಂದು ಸದ್ದು ಅವಳ ಹೊಟ್ಟೆಯಿಂದ ಬರುತಿತ್ತು. ಇನ್ನೂ ಜನಿಸದ ಅಭಿಮನ್ಯು ಮಾವನ ಕಥೆ ಕೇಳುತ್ತಿದ್ದನು. ಆದರೆ ನಿದ್ರಿಸುತ್ತಿದ್ದ ತಂಗಿಯನ್ನು ನೋಡಿ ಕೃಷ್ಣ ಚಕ್ರವ್ಯೂಹವನ್ನು ಛೇದಿಸುವ ರಹಸ್ಯ ಹೇಳಿದನು. ಛೇದಿಸಿದಮೇಲೆ ಅದರಿಂದ ಹೊರಗೆ ಬರುವುದು ಹೇಳದೆ ಹೊರಟು ಹೋದನು.  

ಕುರುಕ್ಷೇತ್ರ ಯುದ್ಧ ಆರಂಭವಾದಾಗ ಅಭಿಮನ್ಯುವಿಗೆ ಕೇವಲ ೧೬ ವರ್ಷ. 

ಕುರುಕ್ಷೇತ್ರದ ೧೩ನೇ ದಿನ. ದ್ರೋಣಾಚಾರ್ಯರು ಚಕ್ರವ್ಯೂಹ ರಚಿಸಿದರು. ಚಕ್ರವ್ಯೂಹ ಅಂದರೆ ಸೈನಿಕರು ಮೇಲಿನಿಂದ ನೋಡಕ್ಕೆ ಚಕ್ರಾಕಾರದಲ್ಲಿ ನಿಂತಿರುವರು. ಸಾಮಾನ್ಯ ಚಕ್ರವಲ್ಲ. ಒಳಗೆ ವಿರೋಧಿ ಸೈನ್ಯದವರು ಹೋದರೆ ಹೊರಗೆ ಬರುವುದು ತುಂಬಾ ಕಷ್ಟ. 
ಇಂಥ ಚಕ್ರವ್ಯೂಹದಿಂದ ಪಾಂಡವರ ಸೈನ್ಯವೆಲ್ಲ ನಾಶವಾಗುತಿತ್ತು. ಇಡೀ ಪಾಂಡವರ ಸೈನ್ಯದಲ್ಲಿ ಕೇವಲ ಅರ್ಜುನನಿಗೆ ಚಕ್ರವ್ಯೂಹ ಮುರಿಯುವ ಶಕ್ತಿ ಹಾಗೂ ಜ್ಞಾನ ಇದ್ದಿದ್ದು. ಆದರೆ ಅರ್ಜುನನು ಕುರುಕ್ಷೇತ್ರದಲ್ಲಿ ಬೇರೊಂದು ಕಡೆ ಯುದ್ಧದಲ್ಲಿ ಇದ್ದನು. ಅರ್ಜುನ ಬೆರಲ್ಲಿ ಇರುವಾಗ ದ್ರೋಣಾಚಾರ್ಯರು ಯುಧಿಷ್ಠಿರನನ್ನು ಚಕ್ರವ್ಯೂಹದಿಂದ ಸೆರೆ ಹಿಡಿದು ಯುದ್ಧ ಗೆಲ್ಲುವ ತಂತ್ರ ಮಾಡಿದ್ದರು. 

ಹೀಗಿರುವಾಗ ಅಭಿಮನ್ಯು ಯುಧಿಷ್ಠಿರನಿಗೆ  ಚಕ್ರವ್ಯೂಹ ಪ್ರವೇಶ ಮಾಡುವುದು ತನಗೆ ಗೊತ್ತೆಂದು ಹೇಳಿದನು. 
'ದೊಡ್ಡಪ್ಪ, ನನಗೆ ಚಕ್ರವ್ಯೂಹವನ್ನು ಪ್ರವೇಶಿಸುವುದು ಗೊತ್ತು. ಆದರೆ ಹೊರಗೆ ಬರುವುದು ಗೊತ್ತಿಲ್ಲ' ಎಂದ ಅಭಿಮನ್ಯು. 
'ಕುಮಾರ, ಹೆದರಬೇಡ. ನೀನು ಮುಂದೆ ನಡಿದು ಚಕ್ರವ್ಯೂಹ ಪ್ರವೇಶ ಮಾಡು. ನಿನ್ನ ಹಿಂದೆ ಭೀಮಸೇನ, ನಕುಲ, ಸಹದೇವ ಹಾಗು ನಾನು ಬರುತ್ತೀವಿ. ಒಮ್ಮೆ ಒಳಗೆ ಹೋದರೆ ಒಟ್ಟಿಗೆ ಹೊರಗೆ ಬರಬಹುದು' 

ಅಭಿಮನ್ಯು ಚಕ್ರವ್ಯೂಹವನ್ನು ಪ್ರವೇಶ ಮಾಡಿದನು. ಆದರೆ ಅವನ ಹಿಂದೆಯೇ ಬರಬೇಕಿದ್ದ ಭೀಮ, ನಕುಲ, ಸಹದೇವ, ಯುಧಿಷ್ಠಿರರನ್ನು ಜಯದ್ರಥ ತಡೆದನು. ಅಭಿಮನ್ಯು ಚಕ್ರವ್ಯೂಹದ ಒಳಗೆ ಹೋದ ತಕ್ಷಣ ಒಂಟಿ ಆಗಿಬಿಟ್ಟ. 

ಒಳಗೆ ಹೋದರೆ ಅಲ್ಲಿ ದ್ರೋಣ,ಕರ್ಣ, ಕೃಪಾ , ದುರ್ಯೋಧನ, ದುಶ್ಶಾಸನರಂಥ ಮಹಾರಥಿಗಳು. ಯುದ್ಧದಲ್ಲಿ ನಿಯಮ ಎಂದರೆ ಒಬ್ಬ ಯೋದ್ಧನ ಎದುರು ಒಬ್ಬ ಯೋದ್ಧನೆ ಯುದ್ಧ ಮಾಡಬೇಕು. ಆದರೆ ಇಲ್ಲಿ ಅಭಿಮನ್ಯುವಿನ  ವಿರುದ್ಧ ಅಷ್ಟೂ ಮಹಾರಥಿಗಳು ಒಟ್ಟಿಗೆ ಪ್ರಹಾರ ಮಾಡಿದರು. ಕರ್ಣ ಅಭಿಮನ್ಯುವಿನ ಬಿಲ್ಲನ್ನು ಹಾಗೂ ಅವನ ರಥವನ್ನು ಮುರಿದನು. ಆದರೂ ಧೈರ್ಯ ಕಳೆದುಕೊಳ್ಳದೆ ಅಭಿಮನ್ಯು ರಥದ ಚಕ್ರವನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದು ಯುದ್ಧ ಮಾಡಿದನು. ಆದರೆ ಎಲ್ಲ ಕೌವ್ರವರು ಅವನನ್ನು ನಿರ್ದಾಕ್ಷಣ್ಯವಾಗಿ ಕೊಂದರು. 

ಅಭಿಮನ್ಯುವಿನ ಧೈರ್ಯಕ್ಕೆ ಸಾಟಿಯಿಲ್ಲ. 

-- 
ಅಭಿಮನ್ಯುವನ್ನು ಮೋಸದಿಂದ ಕೊಂದ ವಿಷಯ ಅರ್ಜುನನಿಗೆ ತಿಳಿದಾಗ ಅವನು ಜಯದ್ರಥನನ್ನು ಮರು ದಿನವೇ ಕೊಲ್ಲುವ ಶಪಥ ಮಾಡಿದನು. ಕೊಲ್ಲದೆ ಇದ್ದಲ್ಲಿ ಅಗ್ನಿಪ್ರವೇಶ ಮಾಡುವ ಪ್ರಮಾಣ ಮಾಡಿದನು. 
--


ಏನಿರಬಹುದು ನೀತಿ?

೧. ಅರ್ಧ ಜ್ಞಾನ ಹಾನಿಕಾರಕ. ಅಭಿಮನ್ಯುವಿಗೆ ಚಕ್ರವ್ಯೂಹ ಪ್ರವೇಶ ಮಾಡುವುದು ತಿಳಿದಿತ್ತೇ ವಿನಃ ಹೊರಗೆ ಬರುವುದಲ್ಲ. ಪೂರ್ತಿಯಾಗಿ ತಿಳಿದಿದ್ದರೆ ಚಕ್ರವ್ಯೂಹದಿಂದ ಹೊರಗೆ ಬರಲು ಆಗುತಿತ್ತು. ಆದರೆ ಅಭಿಮನ್ಯು ಅಂದು ಚಕ್ರವ್ಯೂಹ ಪ್ರವೇಶ ಮಾಡದೆ ಇದಿದ್ದರೆ ಯುಧಿಷ್ಠಿರನನ್ನು ಸೆರೆ ಹಿಡಿದು ಯುದ್ಧ ಗೆದ್ದಿರುತ್ತಿದ್ದರೇನೊ ಕೌರವರು. 
೨. ಒಬ್ಬ ೧೬ ವರ್ಷದ ಹುಡುಗನನ್ನು ಭರವಸೆ ಕೊಟ್ಟು ಮುಂದೆ ಕಳಿಸಿದ ಯುಧಿಷ್ಠಿರ, ಅಭಿಮನ್ಯುವಿನ ಸಾವಿಗೆ ಕಾರಣನಾದನು. ನಾವು ಎಷ್ಟು ಮಾಡಬಹುದೊ ಅದನ್ನಷ್ಟೇ ಮಾಡುತ್ತೀವಿ ಎಂದು ಹೇಳಿದರೆ ಒಳ್ಳೇದು. ಕೈಯಲ್ಲಿ ಆಗದನ್ನು ಮಾಡುತ್ತೀವಿ ಎಂದು ಆಶ್ವಾಸನೆ ನೀಡುವುದು ಸರಿಯಲ್ಲ ಎನ್ನಬಹುದು. 


No comments:

Post a Comment