Tuesday, June 30, 2020

Stories for kids - 8 - Abhimanyu

ವೀರ ಅಭಿಮನ್ಯು 

ಸುಭದ್ರೆ ಶ್ರೀ ಕೃಷ್ಣನ ತಂಗಿ. ಅರ್ಜುನನ ಹೆಂಡತಿಯು ಹೌದು. ಅರ್ಜುನ ಸುಭದ್ರೆಯರ ಮಗನ ಹೆಸರು ಅಭಿಮನ್ಯು. ಸುಭದ್ರೆ ಗರ್ಭಿಣಿಯಾಗಿದ್ದಾಗ ಕೃಷ್ಣನು ಸುಭದ್ರೆಗೆ ಚಕ್ರವ್ಯೂಹವನ್ನು ಛೇದಿಸುವುದು ಹೇಗೆ ಎಂದು ಕಥೆಯಂತೆ ಹೇಳುತ್ತಿದ್ದನು. ಸ್ವಲ್ಪ ಕೇಳಿದನಂತರ ಸುಭದ್ರೆಗೆ ಕಣ್ಣು ಎಳೆದು ನಿದ್ದೆ ಮಾಡಿಬಿಟ್ಟಳು. ಆದರೆ ಕಥೆಯನ್ನು ಕೇಳುತ್ತಿರುವ ಹಾಗೆ 'ಹೂ..  ಹೂ ..' ಎಂದು ಸದ್ದು ಅವಳ ಹೊಟ್ಟೆಯಿಂದ ಬರುತಿತ್ತು. ಇನ್ನೂ ಜನಿಸದ ಅಭಿಮನ್ಯು ಮಾವನ ಕಥೆ ಕೇಳುತ್ತಿದ್ದನು. ಆದರೆ ನಿದ್ರಿಸುತ್ತಿದ್ದ ತಂಗಿಯನ್ನು ನೋಡಿ ಕೃಷ್ಣ ಚಕ್ರವ್ಯೂಹವನ್ನು ಛೇದಿಸುವ ರಹಸ್ಯ ಹೇಳಿದನು. ಛೇದಿಸಿದಮೇಲೆ ಅದರಿಂದ ಹೊರಗೆ ಬರುವುದು ಹೇಳದೆ ಹೊರಟು ಹೋದನು.  

ಕುರುಕ್ಷೇತ್ರ ಯುದ್ಧ ಆರಂಭವಾದಾಗ ಅಭಿಮನ್ಯುವಿಗೆ ಕೇವಲ ೧೬ ವರ್ಷ. 

ಕುರುಕ್ಷೇತ್ರದ ೧೩ನೇ ದಿನ. ದ್ರೋಣಾಚಾರ್ಯರು ಚಕ್ರವ್ಯೂಹ ರಚಿಸಿದರು. ಚಕ್ರವ್ಯೂಹ ಅಂದರೆ ಸೈನಿಕರು ಮೇಲಿನಿಂದ ನೋಡಕ್ಕೆ ಚಕ್ರಾಕಾರದಲ್ಲಿ ನಿಂತಿರುವರು. ಸಾಮಾನ್ಯ ಚಕ್ರವಲ್ಲ. ಒಳಗೆ ವಿರೋಧಿ ಸೈನ್ಯದವರು ಹೋದರೆ ಹೊರಗೆ ಬರುವುದು ತುಂಬಾ ಕಷ್ಟ. 
ಇಂಥ ಚಕ್ರವ್ಯೂಹದಿಂದ ಪಾಂಡವರ ಸೈನ್ಯವೆಲ್ಲ ನಾಶವಾಗುತಿತ್ತು. ಇಡೀ ಪಾಂಡವರ ಸೈನ್ಯದಲ್ಲಿ ಕೇವಲ ಅರ್ಜುನನಿಗೆ ಚಕ್ರವ್ಯೂಹ ಮುರಿಯುವ ಶಕ್ತಿ ಹಾಗೂ ಜ್ಞಾನ ಇದ್ದಿದ್ದು. ಆದರೆ ಅರ್ಜುನನು ಕುರುಕ್ಷೇತ್ರದಲ್ಲಿ ಬೇರೊಂದು ಕಡೆ ಯುದ್ಧದಲ್ಲಿ ಇದ್ದನು. ಅರ್ಜುನ ಬೆರಲ್ಲಿ ಇರುವಾಗ ದ್ರೋಣಾಚಾರ್ಯರು ಯುಧಿಷ್ಠಿರನನ್ನು ಚಕ್ರವ್ಯೂಹದಿಂದ ಸೆರೆ ಹಿಡಿದು ಯುದ್ಧ ಗೆಲ್ಲುವ ತಂತ್ರ ಮಾಡಿದ್ದರು. 

ಹೀಗಿರುವಾಗ ಅಭಿಮನ್ಯು ಯುಧಿಷ್ಠಿರನಿಗೆ  ಚಕ್ರವ್ಯೂಹ ಪ್ರವೇಶ ಮಾಡುವುದು ತನಗೆ ಗೊತ್ತೆಂದು ಹೇಳಿದನು. 
'ದೊಡ್ಡಪ್ಪ, ನನಗೆ ಚಕ್ರವ್ಯೂಹವನ್ನು ಪ್ರವೇಶಿಸುವುದು ಗೊತ್ತು. ಆದರೆ ಹೊರಗೆ ಬರುವುದು ಗೊತ್ತಿಲ್ಲ' ಎಂದ ಅಭಿಮನ್ಯು. 
'ಕುಮಾರ, ಹೆದರಬೇಡ. ನೀನು ಮುಂದೆ ನಡಿದು ಚಕ್ರವ್ಯೂಹ ಪ್ರವೇಶ ಮಾಡು. ನಿನ್ನ ಹಿಂದೆ ಭೀಮಸೇನ, ನಕುಲ, ಸಹದೇವ ಹಾಗು ನಾನು ಬರುತ್ತೀವಿ. ಒಮ್ಮೆ ಒಳಗೆ ಹೋದರೆ ಒಟ್ಟಿಗೆ ಹೊರಗೆ ಬರಬಹುದು' 

ಅಭಿಮನ್ಯು ಚಕ್ರವ್ಯೂಹವನ್ನು ಪ್ರವೇಶ ಮಾಡಿದನು. ಆದರೆ ಅವನ ಹಿಂದೆಯೇ ಬರಬೇಕಿದ್ದ ಭೀಮ, ನಕುಲ, ಸಹದೇವ, ಯುಧಿಷ್ಠಿರರನ್ನು ಜಯದ್ರಥ ತಡೆದನು. ಅಭಿಮನ್ಯು ಚಕ್ರವ್ಯೂಹದ ಒಳಗೆ ಹೋದ ತಕ್ಷಣ ಒಂಟಿ ಆಗಿಬಿಟ್ಟ. 

ಒಳಗೆ ಹೋದರೆ ಅಲ್ಲಿ ದ್ರೋಣ,ಕರ್ಣ, ಕೃಪಾ , ದುರ್ಯೋಧನ, ದುಶ್ಶಾಸನರಂಥ ಮಹಾರಥಿಗಳು. ಯುದ್ಧದಲ್ಲಿ ನಿಯಮ ಎಂದರೆ ಒಬ್ಬ ಯೋದ್ಧನ ಎದುರು ಒಬ್ಬ ಯೋದ್ಧನೆ ಯುದ್ಧ ಮಾಡಬೇಕು. ಆದರೆ ಇಲ್ಲಿ ಅಭಿಮನ್ಯುವಿನ  ವಿರುದ್ಧ ಅಷ್ಟೂ ಮಹಾರಥಿಗಳು ಒಟ್ಟಿಗೆ ಪ್ರಹಾರ ಮಾಡಿದರು. ಕರ್ಣ ಅಭಿಮನ್ಯುವಿನ ಬಿಲ್ಲನ್ನು ಹಾಗೂ ಅವನ ರಥವನ್ನು ಮುರಿದನು. ಆದರೂ ಧೈರ್ಯ ಕಳೆದುಕೊಳ್ಳದೆ ಅಭಿಮನ್ಯು ರಥದ ಚಕ್ರವನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದು ಯುದ್ಧ ಮಾಡಿದನು. ಆದರೆ ಎಲ್ಲ ಕೌವ್ರವರು ಅವನನ್ನು ನಿರ್ದಾಕ್ಷಣ್ಯವಾಗಿ ಕೊಂದರು. 

ಅಭಿಮನ್ಯುವಿನ ಧೈರ್ಯಕ್ಕೆ ಸಾಟಿಯಿಲ್ಲ. 

-- 
ಅಭಿಮನ್ಯುವನ್ನು ಮೋಸದಿಂದ ಕೊಂದ ವಿಷಯ ಅರ್ಜುನನಿಗೆ ತಿಳಿದಾಗ ಅವನು ಜಯದ್ರಥನನ್ನು ಮರು ದಿನವೇ ಕೊಲ್ಲುವ ಶಪಥ ಮಾಡಿದನು. ಕೊಲ್ಲದೆ ಇದ್ದಲ್ಲಿ ಅಗ್ನಿಪ್ರವೇಶ ಮಾಡುವ ಪ್ರಮಾಣ ಮಾಡಿದನು. 
--


ಏನಿರಬಹುದು ನೀತಿ?

೧. ಅರ್ಧ ಜ್ಞಾನ ಹಾನಿಕಾರಕ. ಅಭಿಮನ್ಯುವಿಗೆ ಚಕ್ರವ್ಯೂಹ ಪ್ರವೇಶ ಮಾಡುವುದು ತಿಳಿದಿತ್ತೇ ವಿನಃ ಹೊರಗೆ ಬರುವುದಲ್ಲ. ಪೂರ್ತಿಯಾಗಿ ತಿಳಿದಿದ್ದರೆ ಚಕ್ರವ್ಯೂಹದಿಂದ ಹೊರಗೆ ಬರಲು ಆಗುತಿತ್ತು. ಆದರೆ ಅಭಿಮನ್ಯು ಅಂದು ಚಕ್ರವ್ಯೂಹ ಪ್ರವೇಶ ಮಾಡದೆ ಇದಿದ್ದರೆ ಯುಧಿಷ್ಠಿರನನ್ನು ಸೆರೆ ಹಿಡಿದು ಯುದ್ಧ ಗೆದ್ದಿರುತ್ತಿದ್ದರೇನೊ ಕೌರವರು. 
೨. ಒಬ್ಬ ೧೬ ವರ್ಷದ ಹುಡುಗನನ್ನು ಭರವಸೆ ಕೊಟ್ಟು ಮುಂದೆ ಕಳಿಸಿದ ಯುಧಿಷ್ಠಿರ, ಅಭಿಮನ್ಯುವಿನ ಸಾವಿಗೆ ಕಾರಣನಾದನು. ನಾವು ಎಷ್ಟು ಮಾಡಬಹುದೊ ಅದನ್ನಷ್ಟೇ ಮಾಡುತ್ತೀವಿ ಎಂದು ಹೇಳಿದರೆ ಒಳ್ಳೇದು. ಕೈಯಲ್ಲಿ ಆಗದನ್ನು ಮಾಡುತ್ತೀವಿ ಎಂದು ಆಶ್ವಾಸನೆ ನೀಡುವುದು ಸರಿಯಲ್ಲ ಎನ್ನಬಹುದು. 


Sunday, June 28, 2020

Stories for kids - 7 - Shishupala

ಶಿಶುಪಾಲನ ವಧೆ 

ಶಿಶುಪಾಲ ಹುಟ್ಟಿದಾಗ ಅವನಿಗೆ ಮೂರು ಕಣ್ಣು ನಾಲ್ಕು ಕಯ್ಯಿ ಇತ್ತು. ಧ್ವನಿ ಕತ್ತೆಯ ಕೂಗಿನಂತೆ.  ಇದರಿಂದ ಬೇಜಾರಾಗಿದ್ದ ಅವನ ತಾಯಿ ಶ್ರುತಶ್ರವಳಿಗೆ ಆಕಾಶವಾಣಿಯು ಹೇಳಿತು 'ಈ ಮಗುವನ್ನು ಒಬ್ಬ ಮಹಾಪುರುಷ ಎತ್ತಿಕೊಂಡಾಗ ಎಲ್ಲಾ ಅವಲಕ್ಷಣಗಳು ಸರಿಹೋಗುತ್ತದೆ. ಆದರೆ ಶಿಶುಪಾಲನ ಮೃತ್ಯು ಅವನ ಕಯ್ಯಿಂದಲೇ' 
ತನಗೆ ತಿಳಿದ ಎಲ್ಲಾ ಮಹಾಪುರುಷರು ಸಾಧು ಸಂತರ ಕಯ್ಯಿಗೆ ಮಗುವನ್ನು ಕೊಟ್ಟು ನೋಡುತ್ತಿದ್ದಳು. ಯಾರು ಎತ್ತಿಕೊಂಡರು ಸರಿಹೋಗಲಿಲ್ಲ. ಒಂದು ದಿನ ಅಣ್ಣ ವಸುದೇವನ ಮಗನಾದ ಶ್ರೀ ಕೃಷ್ಣ ಆ ಮಗುವನ್ನು ಎತ್ತಿ ಕೊಂಡನು. ಥಟ್ಟನೆ ಶಿಶುಪಾಲನ ಎಲ್ಲಾ ವಿಚಿತ್ರ ಲಕ್ಷಣಗಳು ಮಾಯವಾಗಿ ಒಂದು ಸಾಮಾನ್ಯ ಮನುಷ್ಯ ಶಿಶುವಿನಂತೆ ಆದನು. ಇದನ್ನು ನೋಡಿ ಶ್ರುತಶ್ರವಳಿಗೆ ಸಂತೋಷವಾಯಿತು. ಆದರೆ ಶಿಶುಪಾಲನ ಮೃತ್ಯು ಕೃಷ್ಣನ ಕೈಯಲ್ಲಿ ಎಂದು ತಿಳಿಯಿತು. ಆಗ ಅವಳು ಕೃಷ್ಣನನ್ನು ಕೇಳಿಕೊಂಡಳು - 'ಕೃಷ್ಣ, ನನ್ನ ಮಗ ಶಿಶುಪಾಲನ ೧೦೦ ತಪ್ಪುಗಳನ್ನು ನೀನು ಕ್ಷಮಿಸುತ್ತೀನಿ ಅಂತ ಪ್ರಮಾಣ ಮಾಡು.'
ಕೃಷ್ಣ ಒಪ್ಪಿಕೊಂಡನು. 

ಎಷ್ಟೋ ವರ್ಷಗಳು ಕಳೆದವು. ಶಿಶುಪಾಲನು ದೊಡ್ಡವನಾದನು. ಯುಧಿಷ್ಠಿರನಿಗೆ ಇಂದ್ರಪ್ರಸ್ಥದ ಪಟ್ಟಾಭಿಷೇಕ ಮಾಡಿದರು. ಯುಧಿಷ್ಠಿರ ರಾಜಸೂಯ ಯಜ್ಞ ಮಾಡಿದ. ರಾಜಸೂಯ ಯಜ್ಞಕ್ಕೆ ಭೀಷ್ಮ, ದ್ರೋಣ, ಕೃಪಾ, ತಮ್ಮಂದಿರಾದ ಕೌರವರು, ಅಂಗರಾಜ ಕರ್ಣ, ಮಾವ ಶಕುನಿ ಹೀಗೆ ಎಲ್ಲಾ ದೊಡ್ಡ ವ್ಯಕ್ತಿಗಳನ್ನು ಕರೆದನು. ಶಿಶುಪಾಲನನ್ನೂ ಕರೆದನು. ರಾಜಸೂಯ ಯಜ್ಞದಲ್ಲಿ ಒಬ್ಬರು ಮುಖ್ಯ ಅತಿಥಿಯಾಗಿರುತ್ತಾರೆ. ಯುಧಿಷ್ಠಿರ ಶ್ರೀ ಕೃಷ್ಣನನ್ನು ಮುಖ್ಯ ಅತಿಥಿಯಾಗಿ ಸಿಂಹಾಸನದ ಮೇಲೆ ಕೂಡಿಸಿದನು. 

ಶಿಶುಪಾಲನ ಕೊನೆ ಹತ್ತಿರ ಬಂದಿತ್ತು ಅಂತ ಕಾಣತ್ತೆ. ತುಂಬಿದ ಸಭೆಯಲ್ಲಿ ಕೋಪದಲ್ಲಿ ಎದ್ದು ಕೃಷ್ಣ ಮುಖ್ಯ ಅತಿಥಿ ಆಗಲು ಅರ್ಹನಲ್ಲ ಎಂದು ಹೇಳಿದನು. ಕೃಷ್ಣನನ್ನು ಅವಮಾನಿಸಲು ಆರಂಭಿಸಿದನು.
 
'ಹಸುಗಳನ್ನು ಕಾಯುವವನು, ಸಿಂಹಾಸನದಮೇಲೆ ಏನು ಮಾಡುತ್ತಿದ್ದಾನೆ?!'

'ಬೆಣ್ಣೆ ಕದಿಯುವವನೂ ಕಳ್ಳನೇ, ಕಳ್ಳನನ್ನ ಹೀಗೆ ಮುಖ್ಯ ಅತಿಥಿಯಾಗಿ ಕೂಡಿಸಿರುವುದು ಇದೇ ಮೊದಲ ಸಾರಿ ಇರಬೇಕು!'

'ಜರಾಸಂಧನನ್ನು ಎದುರಿಸಲು ಆಗದೆ ಓಡಿ ಹೋದ ಹೇಡಿ!'

ಹೀಗೆ ಕೃಷ್ಣನನ್ನು ಅವಮಾನಿಸಿದನು. ಅಣ್ಣ ಬಲರಾಮನಿಗೆ ಮೊದಲೇ ಕೋಪ ಜಾಸ್ತಿ. ಆದರೂ ಕೃಷ್ಣ ಅವನಿಗೆ ಸುಮ್ಮನಿರಲು ಹೇಳಿ ಶಿಶುಪಾಲನಿಗೆ ಮುಂದು ವರೆಯಲು ಹೇಳಿದ. ಕೃಷ್ಣ ಕೈಯಲ್ಲಿ ಒಂದು ಅಡಿಕೆ ತಟ್ಟೆ ಇಟ್ಟುಕೊಂಡಿದ್ದನು. ತನಗೆ ಆಗುತ್ತಿದೆ ಅವಮಾನಗಳನ್ನು  ಅಡಿಕೆಗಳ ಮೂಲಕ ಲೆಕ್ಕ ಹಾಕುತ್ತಿದ್ದನು. ಪ್ರತಿಯೊಂದು ಅವಮಾನಕ್ಕೂ ಒಂದು ಅಡಿಕೆಯಂತೆ ಒಂದು ಸಣ್ಣ ಗುಡ್ಡೆಗೆ ಹಾಕುತ್ತಿದ್ದನು. ೧೦೦ ಅವಮಾನಗಳು ಆದಾಗ, ಕೃಷ್ಣ ಎಚ್ಚರಿಕೆ ನೀಡಿದನು. 
'ಶಿಶುಪಾಲ, ಅತ್ತೆ ಶ್ರುತಶ್ರವಳಿಗೆ ಮಾತು ಕೊಟ್ಟಂತೆ ನಿನ್ನ ೧೦೦ ತಪ್ಪುಗಳನ್ನು ಕ್ಷಮಿಸಿದ್ದೀನಿ. ಇನ್ನು ಒಂದೂ ತಪ್ಪು ಕ್ಷಮಿಸುವುದಿಲ್ಲ ನಾನು. '

ಆದರೆ ಶಿಶುಪಾಲ ನಿಲ್ಲಲಿಲ್ಲ.
  
'ಹೋಗೋ ಹೇಡಿ! ಹೆಂಗಸರ ವಸ್ತ್ರ ಕದಿಯುತ್ತಿದ್ದ ನೀನು ನನಗೆ ಎಚ್ಚರಿಕೆ ಕೊಡ್ತೀಯಾ?!'

ಅದು ಶಿಶುಪಾಲನ ೧೦೧ನೇ ತಪ್ಪು. ಶ್ರೀ ಕೃಷ್ಣನು ನಿಂತುಕೊಂಡು ತನ್ನ ಸುಧರ್ಶನ ಚಕ್ರದಿಂದ ಶಿಷ್ಪಲನ ತಲೆ ಕತ್ತರಿಸಿದನು. 

ವಾಸ್ತವಿಕವಾಗಿ, ಶಿಶುಪಾಲ ಮಹಾವಿಷ್ಣುವಿನ ದ್ವಾರಪಾಲನಾದ 'ಜಯ'ನು. ಒಂದು ಋಷಿಯ ಶಾಪದಿಂದ ಜಯ-ವಿಜಯರು ಮೂರುಸಾರಿ ಭೂಲೋಕದಲ್ಲಿ ವಿಷ್ಣುವಿನ ವೈರಿಗಳಾಗಿ ಜನಿಸಿದ್ದರು. ಮೊದಲು ಹಿರಣ್ಯಕಶ್ಯಪು-ಹಿರಣ್ಯಾಕ್ಷರಾಗಿ, ಎರಡನೇ ಸಾರಿ ರಾವಣ-ಕುಂಭಕರ್ಣರಾಗಿ   ಮೂರನೇ ಹಾಗೂ ಕೊನೆಯ ಸಾರಿ ಶಿಶುಪಾಲ-ದಂತವಕ್ರರಾಗಿ. 

ಕೃಷ್ಣ ಸುದರ್ಶನ ಚಕ್ರ ಬಿಟ್ಟಾಗ ತನ್ನ ಬೆರಳನ್ನು ಸ್ವಲ್ಪ ಗಾಯ ಮಾಡಿಕೊಂಡನು. ಬೆರಳಿನಿಂದ ರಕ್ತ ಬರಲು ಶುರುವಾಯಿತು. ಸಭೆಯಲ್ಲೇ ಇದ್ದ ದ್ರೌಪದಿಯೂ ತನ್ನ ಸೆರಗಿನಿಂದ ಒಂದು ಸಣ್ಣ ತುಂಡು ಬಟ್ಟೆ ಹರಿದು ಬೆರಳಿಗೆ ಕಟ್ಟಿದಳು. 
ಭಾವುಕನಾಗಿ ಕೃಷ್ಣ - 'ಕೃಷ್ಣೆ! ನೀನು ನನ್ನ ಗಾಯಕ್ಕೆ ಹೀಗೆ ಬಟ್ಟೆ ಕಟ್ಟಿ ನನ್ನನ್ನು ನಿನ್ನ ಋಣಿಯಾಗಿಸಿಬಿಟ್ಟೆ. ತಂಗಿ, ನಿನ್ನ ಈ ಋಣ ಮುಂದೆ ತೀರಿಸುತ್ತೀನಿ.'  ಎಂದನು. 

ಹೀಗೆ ಮುಗಿಯಿತು ಶಿಶುಪಾಲನ ಕಥೆ. 

ಏನಿರಬಹುದು ನೀತಿ -

೧.  'ಲಲಾಟ ಲಿಖಿತ ರೇಖಾ ಪರಿಮಾರ್ಶ್ತುಂ ನಾ ಶಕ್ಯತೇ ' - ಅಂದರೆ ಹಣೆಯಲ್ಲಿ ಬರೆದಿರುವುದನ್ನು ಪರಿವರ್ತಿಸಲು ಸಾಧ್ಯವಿಲ್ಲ. ಶಿಶುಪಾಲನಿಗೆ ಗೊತ್ತಿತ್ತು ಕೃಷ್ಣನ ಕಯ್ಯಲ್ಲಿಯೇ ತನ್ನ ಸಾವು ಅಂತ ಆದರೂ ಅವನು ಸುಮ್ಮನಿರಲಿಲ್ಲ.
೨. ನಾವು ಮಾಡುವ ಒಳ್ಳೆ ಕರ್ಮಗಳು ನಮಗೆ ಮುಂದೆ ಸಹಾಯ ಮಾಡುತ್ತವೆ. ದ್ರೌಪದಿ ಕೃಷ್ಣನ ಬೆರಳಿಗೆ ಬಟ್ಟೆ ಕಟ್ಟಿದಾಗ ಅವಳಿಗೆ ಮುಂದೆ ಅವಳ ಸಹಾಯಕ್ಕೆ ಕೃಷ್ಣ ಬರುವನು ಎಂದು ತಿಳಿದಿರಲಿಲ್ಲ. ಕೇವಲ ಅಣ್ಣನಂಥ ಕೃಷ್ಣನಿಗೆ ಸಹಾಯ ಮಾಡುವುದೊಂದೇ ಅವಳಮನಸ್ಸಿನಲ್ಲಿ ಇತ್ತು.   

Saturday, June 27, 2020

Stories for kids - 6 - Palace of wax

ಲಾಕ್ಷಾಗೃಹ 

ಕೌರವರಿಗೆ ಮುಂಚಿನಿಂದಲೂ ಪಾಂಡವರನ್ನು ಕಂಡರೆ ದ್ವೇಷ. 

ಮೋಸದಿಂದ ಪಾಂಡವರನ್ನು ಕೊಲ್ಲಬೇಕು ಎಂದು ದುರ್ಯೋಧನನು ಒಂದು ಕುತಂತ್ರ ಮಾಡಿದನು. ಪುರೋಚನ ಎಂಬ ವಾಸ್ತುಶಿಲ್ಪಿಯ ಕೈಯಲ್ಲಿ ಒಂದು ಲಾಕ್ಷಾಗೃಹವನ್ನು ಪಾಂಡವರಿಗೆ ಎಂದೇ ಕಟ್ಟಿಸಿದನು. ಇದು ಸಾಮಾನ್ಯ ಮನೆಯಲ್ಲ. ನೋಡಲು ಕಲ್ಲು - ಇಟಿಕೆ - ಮಣ್ಣಿನಿಂದ ಕಟ್ಟಿರುವ ಹಾಗೆ ಕಾಣುವುದು. ಆದರೆ ಮೇಣದಲ್ಲಿ ಕಟ್ಟಿರುವಂಥ ಮನೆ. ಬೆಂಕಿ ಎಲ್ಲಾದರೂ ಶುರುವಾದರೆ ಇಡೀ ಮನೆಯು ಕೆಲವೇ ನಿಮಿಷಗಳಲ್ಲಿ ಸುಟ್ಟು ಭಸ್ಮವಾಗುವಂಥ ಮನೆ. ಪಾಂಡವರು ಮಲಗಿರುವಾಗ ಮನೆಗೆ ಬೆಂಕಿ ಹಚ್ಚಿಸಿ ಅವರೆಲ್ಲರನ್ನು ಕೊಲ್ಲಬೇಕೆಂದು ದುರ್ಯೋಧನನ ಕುತಂತ್ರ. 

ಪಾಂಡವರನ್ನು ಕಂಡರೆ ಪಂಚಪ್ರಾಣ ಎನ್ನುವಂತೆ ದುರ್ಯೋಧನ ಆ ಮನೆಯನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟನು. ಎಂದೂ ತೋರದ ಅಕ್ಕರೆಯಿಂದ ಹೇಳಿದ - 'ಯುಧಿಷ್ಠಿರ! ನಿನಗಾಗಿ ಒಂದು ಉತ್ತಮ ಅರಮನೆಯನ್ನು ವಾರ್ನವತದಲ್ಲಿ ಕಟ್ಟಿಸಿದ್ದೀನಿ. ಎಲ್ಲಾ ಪಾಂಡವರು ಹಾಗು ತಾಯಿ ಕುಂತಿ ಅಲ್ಲಿರಬೇಕು ಎನ್ನುವುದು ನನ್ನ ಆಸೆ. '

ತಮ್ಮನಾದ ದುರ್ಯೋಧನನ ಈ ಮಾತು ಕೇಳಿ ಯುಧಿಷ್ಠಿರನಿಗೆ ಸಂತೋಷವಾಯಿತು. 'ಖಂಡಿತವಾಗಿಯೂ, ಅನುಜ! ನಿನ್ನ ಈ ಕಾಣಿಕೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಕೂಡಲೇ ಹೊರಡುತ್ತೀವಿ !'. ದುರ್ಯೋಧನನ ಮಾತುಗಳಲ್ಲಿ ಇದ್ದ ಕಪಟ ಅವನಿಗೆ ತಿಳಿದಿರಲಿಲ್ಲ. 

ದುರ್ಯೋಧನನ ಕುತಂತ್ರ ಚಿಕಪ್ಪನಾದ ವಿಧುರನಿಗೆ ಅರಿವಾಯಿತು. ವಿಧುರನು ಲಾಕ್ಷಾಗೃಹದಿಂದ ಒಂದು ಸುರಂಗ ಮಾರ್ಗವನ್ನು ತೊಡಿಸಿದನು. ಪಾಂಡವರಿಗೆ ಈ ವಿಷಯ ತಿಳಿಸಿದನು. 

ಪಾಂಡವರು ಲಾಕ್ಷಾಗೃಹಕ್ಕೆ ಹೋಗಿ ವಾಸಿಸಲು ಆರಂಭಿಸಿದರು. ಪುರೋಚನ, ದುರ್ಯೋಧನ ಹೇಳಿದಂತೆ ,  ಪಾಂಡವರೆಲ್ಲ ಮಲಗುವ ಸಮಯಕ್ಕೆ ಕಾಯುತ್ತಿದ್ದನು. ಎಲ್ಲರು ಮಲಗಿದಾಗ ಆ ಅರಮನೆಗೆ ಬೆಂಕಿ ಹಚ್ಚಬೇಕು ಎಂದು ಕಾಯುತಿದ್ದನು. ಎಲ್ಲಾ ಪಾಂಡವರು ರಾತ್ರಿ ಮಲಗಿದರೂ ಭೀಮ ಮಲಗುತ್ತಿರಲಿಲ್ಲ. 

ಹೀಗೆ ಆರು ತಿಂಗಳಾದರೂ ಒಂದು ರಾತ್ರಿಯೂ ಭೀಮ ಮಲಗಿದ್ದು ಪುರೋಚನ ನೋಡಲೇ ಇಲ್ಲ. ಪಾಂಡವರ ಊಟದಲ್ಲಿ ವಿಷ ಬೆರೆಸಿ ಕೊಲ್ಲಲು ಪ್ರಯತ್ನಿಸಿದನು. ಆದರೆ ಪುನಃ ವಿಧುರನು ಪಾಂಡವರಿಗೆ ಇದನ್ನು ಮುಂಚೆಯೇ ಹೇಳಿದ್ದನು. ಅಂದು ರಾತ್ರಿ ವಿಷದ ಊಟ ಮಾಡಿದವರಂತೆ ನಾಟಕ ಮಾಡಿ ಪಾಂಡವರು ಮಲಗಿದರು. ಭೀಮನು ಮೂರ್ಛೆ ತಪ್ಪಿದವನಂತೆ ನಟಿಸಿದನು. ಇದನ್ನು ನೋಡಿ ಪುರೋಚನ ಕೊನೆಗೂ ಕಾರ್ಯ ಸಫಲವಾಯಿತು ಎಂದು ಮಧ್ಯಪಾನ ಮಾಡಲು ಆರಂಭಿಸಿದನು. ಇದೇ ಒಳ್ಳೆ ಸಮಯ ಎಂದು ತಿಳಿದು ಯುಧಿಷ್ಠಿರನು ಲಾಕ್ಷಾಗೃಹಕ್ಕೆ ಬೆಂಕಿ ಹಚ್ಚಿಸಿ ಎಲ್ಲಾ ತಮ್ಮಂದಿರು ಹಾಗು ತಾಯಿ ಕುಂತಿಯ ಜೊತೆ ಗುಪ್ತ ಸುರಂಗ ಮಾರ್ಗದಲ್ಲಿ ತಪ್ಪಿಸಿಕೊಂಡು ಹೋದನು. 

ಅದೇ ರಾತ್ರಿ ಲಾಕ್ಷಾಗೃಹದಲ್ಲಿ  ಒಂದು ನಿಷಾದ ಹೆಂಗಸು  ಮತ್ತು ಅವಳ ಐದು ಜನ ಮಕ್ಕಳು ಇದ್ದರು. ಲಕ್ಷಾಗೃಹವನ್ನು ಸುಟ್ಟಾಗ ಆ ಹೆಂಗಸು ಅವಳ ಐದು ಜನ ಮಕ್ಕಳು ಸತ್ತುಹೋದರು. ಮರುದಿನ ಬೆಳಿಗ್ಗೆ ಸುಟ್ಟ ಹೆಣಗಳು ಪಾಂಡವರದೇ ಇರಬೇಕು ಎಂದು ತಿಳಿದು ದುರ್ಯೋಧನನು ಅತಿ ಸಂತೋಷ ಪಟ್ಟನು.  ಆದರೆ ಎಲ್ಲರ ಮುಂದೆ ಮೊಸಳೆ ಕಣ್ಣೀರು ಹರಿಸಿದನು. 

ಪಾಂಡವರು ತಪ್ಪಿಸಿಕೊಂಡ ವಿಷಯ ದುರ್ಯೋಧನನಿಗೆ ಗೊತ್ತಾಗಲಿಲ್ಲ. 

---
ಸುರಂಗ ಮಾರ್ಗದಲ್ಲಿ ತಪ್ಪಿಸಿಕೊಂಡ ಪಾಂಡವರು ಕಾಡಿನಲ್ಲಿ ಸ್ವಲ್ಪ ದಿನವಿದ್ದರು . ಇಲ್ಲಿ ಭೀಮ ಹಿಡಂಬಿಯನ್ನು ಭೇಟಿಯಾದನು. ನಂತರ ಪಾಂಡವರು  ಪಾಂಚಾಲ ರಾಜ್ಯದಲ್ಲಿ ನಡೆದ ಸ್ವಯಂವರದಲ್ಲಿ ದ್ರೌಪಾದಿಯನ್ನು ಮದುವೆಯಾದರು. 
---

ಏನಿರಬಹುದು ನೀತಿ?
೧.  'ಅತಿ ವಿನಯಂ ಧೂರ್ತ ಲಕ್ಷಣಂ' . ಸದಾ ಪಾಂಡರಿಗೆ ಕೇಡು ಬಯಸುವ ದುರ್ಯೋಧನನು ಇದ್ದಕ್ಕಿದ್ದ ಹಾಗೆ ಒಂದು ಅರಮನೆ ಕಾಣಿಕೆ ಕೊಟ್ಟು ಎಂದೂ ತೋರದ ಪ್ರೀತಿ ವಾತ್ಸಲ್ಯ ತೋರಿದಾಗಲೇ ಯುಧಿಷ್ಠಿರನಿಗೆ ಅನುಮಾನ ಬರಬೇಕಿತ್ತು. ವಿಧುರನು ದುರ್ಯೋಧನನ ವಿಚಿತ್ರ ನಡುವಳಿಕೆ ನೋಡಿ ಗುಪ್ತಚರಿಗಳ ಮೂಲಕ ಅವನ ಕುತಂತ್ರ ತಿಳಿದುಕೊಂಡಿದ್ದು. 

೨.  'ನೋಡಿದ್ದು ಸುಳ್ಳಾಗಬಹುದು,  ಕೇಳಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವೂ ತಿಳಿವುದು!' ದುರ್ಯೋಧನ ಕೇವಲ ಸುಟ್ಟ ಹೆಣಗಳಿಂದ ಅದು ಪಾಂಡವರದೇ  ಇರಬೇಕೆಂದು ತಿಳಿದನು. ಒಂದು ಸಾರಿ ನಿಧಾನವಾಗಿ ಯೋಚಿಸಿದ್ದರೆ ಖಚಿತಗೊಳಿಸಲು ಇನ್ನೂ ಹೆಚ್ಚಿಗೆ ಪರೀಕ್ಷೆ ಮಾಡಿಸಬಹುದಿತ್ತು. ಪರೀಕ್ಷೆ ಮಾಡಿದ್ದರೆ ಅಲ್ಲಿದ್ದ ಸುರಂಗ ಮಾರ್ಗ ಕಾಣಿರುತ್ತಿತ್ತು!!

Friday, June 26, 2020

Stories for kids - 5 - Virata Parva

ವಿರಾಟ ಪರ್ವ 

ಪಗಡೆಯಾಟದಲ್ಲಿ ಸೋತ ಯುಧಿಷ್ಠಿರನು ತಮ್ಮಂದಿರು ಹಾಗು ಹೆಂಡತಿಯ ಜೊತೆಯಲ್ಲಿ ೧೨ ವರ್ಷ ವನವಾಸ, ಆದ ನಂತರ ೧ ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಅಜ್ಞಾತವಾಸ ಎಂದರೆ ಯಾರಿಗೂ ಪಾಂಡವರು ಎಲ್ಲಿದ್ದಾರೆ ಎನ್ನುವುದು ಗೊತ್ತಾಗಬಾರದು. ಗೊತ್ತಾದರೆ ಮತ್ತೆ ೧೨ವರ್ಷ ವನವಾಸ ಅನುಭವಿಸಬೇಕು. 

ಪಾಂಡವರು ತಮ್ಮ ಅಜ್ಞಾತ ವಾಸವನ್ನು ಮತ್ಸ್ಯ ರಾಜ್ಯದಲ್ಲಿ ವಿರಾಟ ರಾಜನ ಸೇವಕರಾಗಿ ಕಳೆದರು. ಯುಧಿಷ್ಠಿರ 'ಕಂಕ'ನಾಗಿ ರಾಜನ ಆಸ್ಥಾನ ಸೇರಿದ. ಭೀಮ 'ವಲ್ಲಭ'ನಾಗಿ ಅಡಿಗೆ ಭಟ್ಟನಾಗಿ ಸೇರಿದ. ಅರ್ಜುನ 'ಬೃಹನ್ನಳೆ'ಯಾಗಿ ರಾಜನ ಮಗಳಿಗೆ ನೃತ್ಯ ಹೇಳಿಕೊಡುತ್ತಿದ್ದ. ದ್ರೌಪದಿಯು 'ಮಾಲಿನಿ'ಯಾಗಿ ರಾಣಿಯ ಸೈರಂಧ್ರಿಯಾಗಿ ಇದ್ದಳು. 

ಅಜ್ಞಾತವಾಸದ ವರ್ಷದ ಕೊನೆಯ ತಿಂಗಳು ಬಂತು. ದುರ್ಯೋಧನನಿಗೆ ಏನಾದರೂ ಮಾಡಿ ಪಾಂಡವರನ್ನು ಕಂಡುಹಿಡಿಯಬೇಕು. ಪುನಃ ೧೨ ವರ್ಷ ವನವಾಸಕ್ಕೆ ಕಳಿಸಬೇಕು ಎಂದು ಎಲ್ಲಾ ಕಡೆ ಅವನ ಗುಪ್ತಚರಿಗಳನ್ನು ಕಳಿಸಿದನು. ಆದರೆ ಯಾರಿಗೂ ಪಾಂಡವರೆಲ್ಲಿ ಎನ್ನುವುದು ತಿಳಿಯಲಿಲ್ಲ. ಭೀಷ್ಮ, ವಿಧುರ,ಕ್ರಿಪಾ , ದ್ರೋಣರ ಸಲಹೆ ಕೂಡ ಕೇಳಿದ ದುರ್ಯೋಧನ. ಭೀಷ್ಮ ಪಾಂಡವರ ಜೊತೆ ಯುದ್ಧ ತಪ್ಪು ಅಂತ ಹೇಳಿ ಅವರನ್ನು ಕೊಂಡಾಡಲು ಶುರು ಮಾಡಿದ. ಬಾಯಲ್ಲಿ ಇದ್ದ ರೊಟ್ಟಿಯನ್ನು ಮರೆತು ಹಾಡುವ ಕಾಗೆಯಂತೆ, ಭೀಷ್ಮ ಹೇಳಿದ - 'ಪಾಂಡವರು ಎಲ್ಲಿರುವರೋ ಆ ರಾಜ್ಯ ಹೋದ ವರ್ಷದಲ್ಲಿ ತುಂಬಾ ಅಭಿವೃದ್ಧಿ ಆಗಿರುತ್ತೆ' ಅಂತ. ಈ ಮಾತನ್ನು ಕೇಳಿದ ದುರ್ಯೋಧನನ ಮಿತ್ರ ತ್ರಿಗತ ದೇಶದ ರಾಜ ಸುಶರ್ಮಾ. ಪಕ್ಕದ ಮತ್ಸ್ಯ ದೇಶ ಆಕಸ್ಮಿಕವಾಗಿ ಹೋದ ವರ್ಷದಲ್ಲಿ ತುಂಬಾ ಅಭಿವೃದ್ಧಿ ನೋಡಿತ್ತು.  ಪಾಂಡವರು ಮತ್ಸ್ಯ ರಾಜ್ಯದಲ್ಲಿರಬಹುದು ಎಂದು ಊಹೆ ಮಾಡಿ ದುರ್ಯೋಧನನಿಗೆ ವಿರಾಟ ರಾಜನಮೇಲೆ ದಂಡೆತ್ತಿ ಹೋಗುವಂತೆ ಹೇಳಿದ. 

ಹಾಗೆಯೇ ದುರ್ಯೋಧನನು ಮತ್ಸ್ಯ ದೇಶದಮೇಲೆ ಯುದ್ಧಕ್ಕೆ ಹೋದನು. ಅದಕ್ಕೂ ಮುಂಚೆ ತ್ರಿಗತ ರಾಜ ಸುಶರ್ಮ ಮತ್ಸ್ಯ ದೇಶದಮೇಲೆ ಇನ್ನೊಂದು ಕಡೆಯಿಂದ ಆಕ್ರಮಿಸಿದನು. ಹೀಗಾಗಿ ದುರ್ಯೋಧನನ್ನು ಎದುರಿಸಲು ಯಾರೂ ಇರಲಿಲ್ಲ. ವಿರಾಟನ ಮಗ ಉತ್ತರ ಕುಮಾರನು ಹೊರಟನು. 

ಎಂದೂ ರಣಭೂಮಿಯನ್ನು ನೋಡದ ಉತ್ತರ ಕುಮಾರ ದ್ರೌಪಾದಿಯ ಸಲಹೆಯಂತೆ ಬೃಹನ್ನಳೆಯನ್ನು ಸಾರಥಿಯಂತೆ ಕರೆದುಕೊಂಡು ಹೋದನು. 

ರಣ ಭೂಮಿಗೆ ಹೋದರೆ ಎದುರಲ್ಲಿ ಭೀಷ್ಮ, ದ್ರೋಣ, ಕರ್ಣ,ದುರ್ಯೋಧನನಂತಹ ಮಹಾರಥಿಗಳು. ಕೊನೆ ಕಾಣದಷ್ಟು ದೊಡ್ಡ ಸೈನ್ಯ. ಉತ್ತರ ಕುಮಾರನ ಎದೆಯು ಅತಿ ಜೋರಾಗಿ ಬಡಿದುಕೊಳ್ಳಲು ಶುರುವಾಯಿತು. ಓಡಿಹೋಗೋದೆ ಒಳ್ಳೇದು ಎಂದು ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನನ್ನು ರಥ ಹಿಂದಕ್ಕೆ ತಿರುಗಿಸಲು ಹೇಳಿದ. 

'ಹೇಡಿ ಎನ್ನಿಸಿಕೊಳ್ಳಬೇಡ, ವೀರ. ಯುದ್ಧ ಮಾಡು!' ಎಂದ ಬೃಹನ್ನಳೆ. 

ತರ್ಕ ಬದ್ಧವಾಗಿ ಯೋಚನೆ, ಸಂಭಾಷಣೆ ಮಾಡುವ ಸ್ಥಿತಿಯಲ್ಲಿಲ್ಲದ ಉತ್ತರ ಕುಮಾರನು ರಥ ಇಳಿದು ಓಡಿ  ಹೋದನು. ಆದರೆ ಅರ್ಜುನ ಅವನನ್ನು ಹಿಡಿದು ಮತ್ತೆ ರಥದಲ್ಲಿ ನಿಲ್ಲಿಸಿದ. ಇವನ ಕೈಯಲ್ಲಿ ಆಗುವುದಿಲ್ಲ ಎಂದು ತಿಳಿದು ಅರ್ಜುನ ಉತ್ತರ ಕುಮಾರನಿಗೆ ರಥದ ಸಾರಥಿಯಾಗಲು ಹೇಳಿದ. ಅಜ್ಞಾತವಾಸದ ಮುನ್ನ ಪಾಂಡವರು ಅಸ್ತ್ರ ಶಸ್ತ್ರಗಳನ್ನು  ಒಂದು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದರು. ಆ ಮರದ ಕಡೆಗೆ ಹೋಗಲು ಆದೇಶಿಸಿದ ಅರ್ಜುನ. ಏನೂ ಅರ್ಥ ಆಗದೆ ಉತ್ತರ ಕುಮಾರನು ಹೇಳಿದಂತೆ ಮಾಡಿದನು. ಮರದ ಹತ್ತಿರ ಹೋಗಿ ಅದರಲ್ಲಿ ಅಡಗಿದ್ದ ತನ್ನ ಧನಸ್ಸು - ಗಾಂಢೀವಿ ಹಾಗು ತನ್ನ ಶಂಖ - ದೇವದತ್ತ ತಗೊಂಡನು. ಮತ್ತೆ ರಣರಂಗಕ್ಕೆ ಹೋದರು. 

ಅರ್ಜುನ ಗಾಂಢೀವಿಗೆ ತಂತಿ ಕಟ್ಟಿ ಒಮ್ಮೆ ಎಳೆದು ಬಿಟ್ಟನು. ಆ ಶಬ್ದ ಇಡೀ ಕುರು ಸೇನೆಯ ಎದೆಯಲ್ಲಿ ಭೀತಿ ಹುಟ್ಟಿಸಿತು. ಯುದ್ಧ ಪ್ರಾರಂಭ ಮಾಡಲು ದೇವದತ್ತ ಶಂಖ ನಾದ ಮಾಡಿದನು. ಇದು ಅರ್ಜುನನೇ ಇರಬೇಕೆಂದು ಎಲ್ಲರಿಗೂ ಅರ್ಥವಾಯಿತು. 

ಆವತ್ತು ಅರ್ಜುನ, ಒಂದು ಹಸಿದ ಸಿಂಹದಂತೆ ಕುರು ಸೇನೆಯನ್ನು ಧ್ವಂಸ ಮಾಡಿದನು. ಬೇಕಿದ್ದರೆ ಅಂದೇ ದುರ್ಯೋಧನ, ದುಷ್ಶಾಸನರನ್ನು ಕೊಂದಿರುತ್ತಿದ್ದ. ಆದರೆ ಕುರುಕ್ಷೇತ್ರ ಯುದ್ಧದಲ್ಲೇ ಎದುರಿಸಬೇಕು, ದುರ್ಯೋಧನ ದುಶ್ಶಾಸನರನ್ನು ಭೀಮನೇ ಕೊಲ್ಲಬೇಕು ಎಂದು ಕೇವಲ ಅವರನ್ನು ಮೂರ್ಛೆ ತಪ್ಪುವಂತೆ ಮಾಡಿದನು. ಹೀಗೆ ಅರ್ಜುನ ಕುರು ಸೇನೆಯನ್ನು ಸೋಲಿಸಿದ. 

---
೧. ಬೃಹನ್ನಳೆಯೇ ಅರ್ಜುನ ಎಂದು ತಿಳಿಯುವಷ್ಟರಲ್ಲಿ ಅಜ್ಞಾತ ವಾಸದ ವರ್ಷ ಸಮಾಪ್ತಿಯಾಗಿತ್ತು. 
೨. ಪ್ರತಿ ವರ್ಷ ಅದೇ ದಿನ ನಾವು ನವರಾತ್ರಿಯಲ್ಲಿ ಆಯುಧ ಪೂಜೆ ಮಾಡುತ್ತೀವಿ. 
---

ಏನಿರಬಹುದು ನೀತಿ - 

೧. ಭೀಷ್ಮ ಮಾತಾಡುವ ಮುನ್ನ ಯೋಚನೆ ಮಾಡದೆ ತನಗೆ ಗೊತ್ತಿಲ್ಲದಂತೆ ಪಾಂಡವರೆಲ್ಲಿರಬಹುದು ಎಂದು ಹೇಳಿದ. ಮಾತಾಡುವ ಮುನ್ನ ಯೋಚನೆ ಮಾಡಿ ಮಾತಾಡಿದರೆ ಒಳ್ಳೇದು. 
೨. ಎಷ್ಟೋ ವರ್ಷಗಳು ಧನುರ್ವಿದ್ಯೆ ಅಭ್ಯಾಸ ಮಾಡಿದ ಅರ್ಜುನ ೧ ವರ್ಷ ಅಜ್ಞಾತದಲ್ಲಿ ಇದ್ದ ಮಾತ್ರಕ್ಕೆ ಕಲಿತ ವಿದ್ಯೆ ಮರೆಯಲಿಲ್ಲ. ಚೆನ್ನಾಗಿ ಕಲಿತ ವಿದ್ಯೆ ಸುಲಭವಾಗಿ ಮರೆಯುವುದಿಲ್ಲ. 


Thursday, June 25, 2020

Stories for kids - 4 - Duryodhana's weakness

ದುರ್ಯೋಧನನ ದೌರ್ಬಲ್ಯ 

ಕುರುಕ್ಷೇತ್ರ ಯುದ್ಧದ ೧೭ನೇ ದಿನ. ದುರ್ಯೋಧನನ ಎಲ್ಲ ೯೯ ತಮ್ಮಂದಿರನ್ನು ಭೀಮ ಕೊಂದಿದ್ದನು. ಅಂದು ರಾತ್ರಿ ತಾಯಿ ಗಾಂಧಾರಿಯನ್ನು ನೋಡಲು ದುರ್ಯೋಧನ ಹೋದನು. 
'ತಾಯಿ, ನಿನ್ನ ೯೯ಜನ ಮಕ್ಕಳು ವೀರಗತಿ ಹೊಂದಿದ್ದಾರೆ. ನಾನು ಒಂಟಿ ಆದೆ.  ಪಾಂಡವರನ್ನು ಸೋಲಿಸಬೇಕೆಂದರೆ ನೀನೆ ನನಗೆ ಆಶೀರ್ವಾದ ಕೊಡಬೇಕು. ನನಗೆ ಚಿರಂಜೀವಿ ಆಗುವ ವರ ಕೊಡು ತಾಯಿ. ' ಎಂದ ದುರ್ಯೋಧನ. 

೯೯ ಮಕ್ಕಳನ್ನು ಕಳೆದುಕೊಂಡ ನೋವಿನಿಂದ ನರಳುತ್ತಿದ್ದ ಗಾಂಧಾರಿ ಹೇಳಿದಳು 'ಮಗ, ನಾನು ಹೇಳಿದಂತೆಯೇ ಮಾಡು. ಹೋಗು, ಹೋಗಿ ಸ್ನಾನ ಮಾಡಿಕೊಂಡು ಏನೂ ಬಟ್ಟೆ ಇಲ್ಲದೆ ನನ್ನ ಮುಂದೆ ಬಂದು ನಿಲ್ಲು. '

'ಬಟ್ಟೆ ಇಲ್ಲದೆ ಯಾಕೆ ಮಾತೆ ?' ಎಂದ ದುರ್ಯೋಧನ. 

'ನಾನು ಹೇಳಿದಂತೆ ಮಾಡು' ಎಂದಳು ಗಾಂಧಾರಿ ಮಗನ ತಳಹರಟೆಯ ಮಾತಿನಿಂದ ಕೋಪ ಬಂದು. 

ಹುಟ್ಟುಕುರುಡನಾದ ಧ್ರಿತರಾಷ್ಟ್ರನನ್ನು ಮದುವೆಯಾದ ಗಾಂಧಾರಿ ಪತಿಗೆ ಕಾಣದ ಲೋಕ ತಾನು ನೋಡುವುದು ಬೇಡ ಎಂದು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದಳು. ಮದುವೆಯಾದಾಗಲಿಂದ ಒಂದು ಸಾರಿ ಕೂಡ ತೆಗೆದಿರಲಿಲ್ಲ. ಅವಳ ಭಕ್ತಿ ಹಾಗು ತಪಸ್ಸಿನ ಫಲಗಳೆಲ್ಲ ಒಂದೇ ದೃಷ್ಟಿಯಲ್ಲಿ ಸೇರಿಸಿ ದುರ್ಯೋಧನನ ಮಯ್ಯಿ ನೋಡಿದರೆ, ನೋಡಿದ ಅಂಗಗಳೆಲ್ಲ ವಜ್ರದಂತೆ ಆಗುತ್ತೆ. 

ಗಾಂಧಾರಿ ಹೇಳಿದಂತೆ ದುರ್ಯೋಧನ ಸ್ನಾನ ಮಾಡಿಕೊಂಡು ಏನೂ ಬಟ್ಟೆ ಇಲ್ಲದೆ ತಾಯಿಯ ಶಿಭಿರಕ್ಕೆ ಹೋಗುತ್ತಿದ್ದನು. ಇದನ್ನು ಶ್ರೀ ಕೃಷ್ಣನು ನೋಡಿ - 'ಏನಯ್ಯ ದುರ್ಯೋಧನ! ಬಟ್ಟೆ ಯಾಕೆ ಹಾಕಿಲ್ಲ, ಎಲ್ಲಿಗೆ ಹೊರಟಿದ್ಯಾ?'.

ದುರ್ಯೋಧನನಿಗೆ ನಾಚಿಕೆ ಆಗಿ ತಾಯಿ ಗಾಂಧಾರಿಯ ಆದೇಶದಂತೆ ನಡೆದುಕೊಳ್ಳುತ್ತಿದ್ದೀನಿ ಎಂದ. ಅತಿ ತೀಕ್ಷ್ಣ ಬುದ್ಧಿಯುಳ್ಳ ಶ್ರೇ ಕೃಷ್ಣನು ಗಾಂಧಾರಿ ಮಗನನ್ನು ಅಜೇಯನಾಗಿ ಮಾಡುವಳು ಎಂದು ಊಹೆ ಮಾಡಿಕೊಂಡ. 

'ತಾಯಿಯಮುಂದೆ ಬಟ್ಟೆ ಇಲ್ಲದೆ ಹೋಗುವ ವಯಸ್ಸಾ ನಿನ್ನದು?! ಸ್ವಲ್ಪ ಕುರು ವಂಶದ ಘನತೆ ಕಾಪಾಡು. ಕನಿಷ್ಟ ಒಂದು ಬಾಳೆ ಎಳೆಯನ್ನಾದರೂ ಅಂಗವಸ್ತ್ರದ ಹಾಗೆ ಇಟ್ಟುಕೊಂಡು ಹೋಗು.' ಎಂದು ಗೇಲಿ ಮಾಡಿದ ಕೃಷ್ಣ. 

ದುರ್ಯೋಧನನಿಗೆ ಕೃಷ್ಣನ ಮಾತು ಸರಿ ಅನ್ನಿಸಿ ಒಂದು ಬಾಳೆಎಲೆ ಅಂಗವಸ್ತ್ರದಹಾಗೆ ಇಟ್ಟು ಗಾಂಧಾರಿಯ ಶಿಭಿರವನ್ನು ಪ್ರವೇಶಿಸಿ 'ತಾಯಿ, ನೀನು ಹೇಳಿದಹಾಗೆ ಸ್ನಾನ ಮಾಡಿ ಬಟ್ಟೆ ಇಲ್ಲದೆ ಬಂದಿದ್ದೀನಿ, ನೋಡು. ' ಎಂದ. 

ಇದನ್ನು ಕೇಳಿ ಗಾಂಧಾರಿ ತನ್ನ ಕಣ್ಣಿಗೆ ಕಟ್ಟಿದ್ದ ಕಪ್ಪು ಬಟ್ಟೆ ತೆಗೆದು ತನ್ನ ಮಗನನ್ನು ಮೊದಲ ಸಾರಿಗೆ ನೋಡಿದಳು. ಅವಳ ದೃಷ್ಟಿ ಬಿದ್ದ ಎಲ್ಲ ಅಂಗಗಳು ಅವಳ ತಪೋಶಕ್ತಿಯಿಂದ ವಜ್ರದ್ದಾದವು. ಆದರೆ ಅಂಗವಸ್ತ್ರದಂತೆ ಬಾಳೆಎಲೆ ಅಡ್ಡ ಇದ್ದರಿಂದ ದುರ್ಯೋಧನನ ತೊಡೆಗಳ ಮೇಲೆ ತಾಯಿಯ ಧೃಷ್ಟಿ ಬೀಳಲಿಲ್ಲ . 

ಕೋಪದಿಂದ ಗಾಂಧಾರಿ 'ದುರ್ಯೋಧನ, ನಾನು ಹೇಳಿದಂತೆ ನೀನು ಯಾಕೆ ನಡೆದುಕೊಂಡಿಲ್ಲ? ಬಾಳೆ ಎಲೆ ಅಡ್ಡ ಯಾಕೆ ಇಟ್ಟೆ. ನಿನ್ನ ತಾಯಿ ಮುಂದೆ ನಿನಗೆ ಯಾಕೆ ಸಂಕೋಚ? '
'ನನ್ನ ಎಷ್ಟೋ ವರ್ಷಗಳ ತಪೋಶಕ್ತಿ ಸೇರಿಸಿ ನನ್ನ ಧೃಷ್ಟಿ ಬಿದ್ದ ಅಂಗಗಳೆಲ್ಲ ವಜ್ರದ್ದಾಗಿಸಿದೆ. ಆದರೆ ನಿನ್ನ ತೊಡೆ ಮುಂಚಿನಹಾಗೆ ಉಳಿದುಬಿಟ್ಟಿದೆ. ನೀನು ಯಾಕೆ ಹೀಗೆ ಮಾಡಿದೆ?' ಎಂದು ದುಃಖಿಸುತ್ತಾ ಕೇಳಿದಳು. 

ತನ್ನ ತಪ್ಪು ಅರಿವಾಗಿ, ದುರ್ಯೋಧನ - 'ಕ್ಷಮಿಸು ತಾಯಿ, ನೀನು ಹೇಳಿದರೆ ಇನ್ನೊಮ್ಮೆ ಸ್ನಾನ ಮಾಡಿ ಬರ್ತೀನಿ. ಈ ಸಾರಿ ನೀನು ನನ್ನ ಎಲ್ಲ ಅಂಗಗಳನ್ನು ವಜ್ರದ್ದಾಗಿಸು. '

'ಮಗ, ನಾನು ಮಾಯಾವಿ ಅಲ್ಲ. ನಿನಗೆ ಚಿರಂಜೀವಿ ಆಗುವ ವರ ಕೊಡುವುದು ನನ್ನ ಶಕ್ತಿಗೆ ಮೀರಿದ್ದು. ಆದರೆ ಶಿವ ಭಕ್ತೆಯಾದ ನಾನು ನಿನ್ನ ಮಯ್ಯನ್ನು ವಜ್ರದ್ದಾಗಿಸಬಲ್ಲೆ. ನಾನು ನನ್ನ ಇದ್ದ ಎಲ್ಲ ಶಕ್ತಿಯನ್ನು ಆ ಧೃಷ್ಟಿಯಲ್ಲಿ ಉಪಯೋಗಿಸಿಬಿಟ್ಟೆ. ದೊಡ್ಡವರ ಮಾತಿಗೆ ಬೆಲೆ ಕೊಡದೆ ನೀನು ಗೆಲ್ಲುವ ಅವಕಾಶ ಕಳೆದುಕೊಂಡೆ' ಎಂದು ದುಃಖಿಸಿದಳು ಗಾಂಧಾರಿ. 

--
೧೮ನೇ ದಿನ, ಗಧಾ ಯುದ್ಧದಲ್ಲಿ ಭೀಮ ದುರ್ಯೋಧನನ ತೊಡೆ ಮುರಿದು ದುರ್ಯೋಧನನ್ನು ಸಂಹರಿಸಿದ. 
--

ಏನಿರಬಹುದು ನೀತಿ ?
೧. ಬೇರೆಯವರು ಏನು ಅಂದುಕೊಳ್ಳುವರೋ ಅಂತ ದುರ್ಯೋಧನ ತಾಯಿಯ ಮಾತು ಮೀರಿ ಅವಳ ಆಜ್ಞೆ ಉಲ್ಲಂಘಿಸಿದ. ತನ್ನ ಸ್ವಂತ ಬುದ್ಧಿಯಿಂದ ಆಲೋಚಿಸಿದ್ದರೆ ತಾಯಿಯ ಈ ವಿಚಿತ್ರ ಆಜ್ಞೆಯ ಹಿಂದೆ ಉದ್ದೇಶ ಅರ್ಥವಾಗಿರುತ್ತಿತೇನೋ. ಆದ್ದರಿಂದ ಬೇರೆಯವರು ಏನು ಅಂದುಕೊಳ್ಳುವರೋ ಅನ್ನುವುದಕ್ಕಿಂತ ನಾವು ಏನು ಸರಿಯೋ ಅದನ್ನು ಮಾಡಿದರೆ ಒಳ್ಳೇದು. 
೨. ಭೀಷ್ಮ, ದ್ರೋಣ, ಕ್ರಿಪಾ , ವಿದುರರಂಥ ಮಹಾನುಭಾವರ ಮಾತನ್ನು ಕೇಳದ ದುರ್ಯೋಧನ ಅಂದು ತಾಯಿಯ ಮಾತನ್ನು ಕೇಳುವನೇ ? - ಎಂಬ ಪ್ರಶ್ನೆ ಗಾಂಧಾರಿಗೆ ತೋಚಿದ್ದರೆ ಅವಳು ಕೊಟ್ಟ ಆಜ್ಞೆಯ ಹಿಂದಿನ ಕಾರಣ ಬಿಡಿಸಿ ಹೇಳಿರುಬಹುದಿತ್ತು. ಕೆಲವೊಮ್ಮೆ ಬೇರೆಯವರಿಗೆ ನಮ್ಮ ಮಾತಿನ ಅರ್ಥ ತಿಳಿದಿರಲ್ಲ. ಹೆಚ್ಚಿಗೆ ಊಹೆ ಮಾಡಿಕೊಳ್ಳದೆ, ಸರಳ ರೀತಿಯಲ್ಲಿ ಮಾತಾಡುವುದು ಉತ್ತಮ. 

Tuesday, June 23, 2020

Stories for kids - 3 - Generosity of Karna

ದಾನಶೂರ ಕರ್ಣ 


ಕರ್ಣನ ಉದಾರ ಮನೋಭಾವ ತಿಳಿದಿದ್ದ ಶ್ರೀ ಕೃಷ್ಣ ಅವನಿಗೆ 'ದಾನ ಶೂರ ಕರ್ಣ' ಎಂಬ ಬಿರುದ್ದು ಕೊಟ್ಟಿದ್ದ.

ಕರ್ಣನಿಗೆ ಸಿಕ್ಕ ಬಿರುದ್ದು ತನಗೆ ಯಾಕೆ ಸಿಗಲಿಲ್ಲ ಎಂದು ದುರ್ಯೋಧನನಿಗೆ ಅರ್ಥ ಆಗಲಿಲ್ಲ. ಅವನು ಆಲೋಚಿಸಿದ - 'ಕರ್ಣನಿಗಿಂತ ನಾನು ಏನು ಕಮ್ಮಿ? ಕರ್ಣನಿಗೆ ರಾಜ್ಯ ದಾನ ಮಾಡಿದ ನಾನು ಇನ್ನೆಷ್ಟು ದೊಡ್ಡ ದಾನಿ ಆನಿಸಿಕೊಳ್ಳಬೇಡ?' .

ಒಮ್ಮೆ ಕೃಷ್ಣನನ್ನು ಭೇಟಿ ಮಾಡಿ ದುರ್ಯೋಧನ ಕೇಳಿದ ' ಕೃಷ್ಣ, ನೀನು ಕರ್ಣನಿಗೆ ದಾನಶೂರ ಎಂದು ಬಿರುದ್ದು ಕೊಟ್ಟೆ. ಆದರೆ ನಾನು ಅವನಿಗಿಂತ ಯಾವ ರೀತಿಯಲ್ಲಿ ಕಮ್ಮಿ? ನೀನೆ ಹೇಳು? ನನಗೆ ಬಿರುದ್ದು ಯಾಕೆ ಕೊಡಲಿಲ್ಲ ನೀನು?'
ಇದನ್ನು ಕೇಳಿದ ಕೃಷ್ಣ ನಗುತ್ತ ಹೇಳಿದ 'ದುರ್ಯೋಧನ, ಕಾಲ ಬಂದಾಗ ನಾನೇ ಹೇಳುತ್ತೀನಿ ಯಾಕೆ ಅಂತ. '

ಸ್ವಲ್ಪ ದಿನಗಳ ನಂತರ ಒಂದು ರಾತ್ರಿ ಜೋರು ಮಳೆ ಬರುತಿತ್ತು. ಮೂರು ನಾಲ್ಕು ದಿನಗಳಿಂದ ನಿಲ್ಲದಂಥ ಮಳೆ ಅದು. ಒಬ್ಬ ವಯ್ಯಸ್ಸಾದವನ ವೇಷ ಧರಿಸಿ ಕೃಷ್ಣ ದುರ್ಯೋಧನನ ಅರಮನೆಗೆ  ಬಂದನು. 'ರಾಜ, ನನ್ನ ಮಗಳ ಮದುವೆ ನಾಳೆ ಇದೆ. ಅದಕ್ಕೆ ಹೋಮ ಮಾಡಲು ಒಣಗಿದ ಸೌದೆ ದಾನ ಮಾಡುವೆಯ?' ಎಂದ ವೃದ್ಧನ  ರೂಪದಲ್ಲಿದ್ದ ಕೃಷ್ಣ. ದುರ್ಯೋಧನ ಕೂಡಲೇ ಅವನ ಸೇವಕರನ್ನು ಕರೆದು ಆ ಮುದಿ ಜೀವಕ್ಕೆ ಸೌದೆ ನೀಡಲು ಆಜ್ಞೆ ನೀಡಿದ. ಸೇವಕರು ಅವನ ಆಜ್ಞೆಯಂತೆ ಸೌದೆ ಹುಡುಕಲು ಹೊರಟರು. ಆದರೆ ಎಲ್ಲಿ ಹೋದರು ಸೌದೆ ಸಿಗಲಿಲ್ಲ, ಇದ್ದ ಸೌದೆ ಎಲ್ಲ ಮಳೆಯಲ್ಲಿ ಒದ್ದೆ ಆಗಿದ್ದವು. ಬರಿ ಕಯ್ಯಿ ಹಿಂತಿರುಗಿ ಸೌದೆ ಸಿಗಲಿಲ್ಲ ವೆಂದು ದುರ್ಯೋಧನನಿಗೆ ಹೇಳಿದರು. ಆಗ ದುರ್ಯೋಧನ ವೃದ್ಧನ ವೇಷದಲ್ಲಿದ್ದ ಕೃಷ್ಣನಿಗೆ 'ಅಯ್ಯ, ಈ ಘೋರ ಮಳೆಯಲ್ಲಿ ಸೌದೆ ಬೇಕೆಂದರೆ ಅದು ಆಗದ ಮಾತು. ನಿನಗೆ ಬೇರೆ ಏನಾದರೂ ಸಹಾಯ ಬೇಕಿದ್ದಲ್ಲಿ ಕೇಳು' ಎಂದನು. ಅದಕ್ಕೆ ಆ ವಯಸ್ಸಾದವನು ನಿರಾಶೆ ವ್ಯಕ್ತ ಪಡಿಸುತ್ತಾ 'ರಾಜ, ನಿನ್ನ ಕೈಯಲ್ಲಿ ಸೌದೆ ದಾನ ಮಾಡಲು ಆದರೆ ಮಾಡು, ಅದು ಬಿಟ್ಟು ಬೇರೆ ಏನು ಬೇಡ ನನಗೆ' ಎಂದು ಅಲ್ಲಿಂದ ಹೊರಟು ಹೋದ.

ಅಲ್ಲಿಂದ ವೃದ್ಧನ ವೇಷದಲ್ಲಿದ್ದ ಕೃಷ್ಣನು ಕರ್ಣನ ಹತ್ತಿರ ಹೋಗಿ ಅದೇ ಸೌದೆಯ ಕೋರಿಕೆ ಮುಂದಿಟ್ಟ. ಕರ್ಣ ಆಲೋಚಿಸಿದ. ಇಂಥ ಮಳೆಯಲ್ಲಿ ಒಣಗಿದ ಸೌದೆ ಸಿಗಲು ಸಾಧ್ಯ ಇಲ್ಲ ಎಂದು ತಿಳಿದ. ಅವನ ಅರಮನೆಯ ಒಂದು ಕೋಣೆಯನ್ನು ಸೇವಕರ ಕೈಯಲ್ಲಿ ಹೊಡೆಸಿ ಅದರಲ್ಲಿದ್ದ ಮರವನ್ನು ಸೌದೆಯಾಗಿ ದಾನ ನೀಡಿದ. ಕೃಷ್ಣನು ಅವನ ವೇಷ ತೆಗೆದು ಅವನ ನಿಜ ರೂಪ ತೋರಿಸಿದ. ಕರ್ಣನ ಉದಾರ ಮನೋಭಾವವನ್ನು ಕೊಂಡಾಡಿದ.

ಈ ವಿಷಯ ದುರ್ಯೋಧನನಿಗೂ ಹೇಳಿದ. 'ಈಗ ತಿಳಿಯಿತಾ, ದುರ್ಯೋಧನ ? ದಾನಶೂರ ಎಂದು ಕರೆಸಿಕೊಳ್ಳಲು ಕರ್ಣ ಮಾತ್ರ ಯಾಕೆ ಅರ್ಹ ಎಂದು ?'  ದುರ್ಯೋಧನನಂಥ ದುರಹಂಕಾರಿಯೂ ಒಪ್ಪಲೇ ಬೇಕಿತ್ತು ಕೃಷ್ಣನ ತರ್ಕ.

ನೀತಿ ಏನಿರಬಹುದು?
೧. ದುರ್ಯೋಧನನ ಹತ್ತಿರ ಕರ್ಣನಿಗಿಂತ ದೊಡ್ಡ ಅರಮನೆ ಇತ್ತು. ಆದರೆ ಅವನಿಗೆಕರ್ಣನ ಸಹಾಯ ಹಾಗು ದಾನ ಮಾಡುವ ಮನಸ್ಸು ಇರಲಿಲ್ಲ. ಅದಕ್ಕೆ ದಾನ ಮಾಡಲು ಶ್ರೀಮಂತಿಕೆ ಇದ್ದಾರೆ ಸಾಲದು - ದೊಡ್ಡ ಮನಸ್ಸೇ ಮುಖ್ಯ.
೨. ಪ್ರತಿಯೊಬ್ಬರಿಗೂ ಅವರದೇ ಆದ ಒಳ್ಳೆಯ ಗುಣಗಳಿರುತ್ತದೆ. ಅಸೂಯೆಪಡುವುದರಿಂದ ಏನು ಪ್ರಯೋಜನ ಇಲ್ಲ. ಆದರೆ ಬೇರೆಯವರನ್ನು ನೋಡಿ ಕಲಿಯಬೇಕು. 




Stories for kids - 2 - Krishna or Vaishnavi sena

ಶ್ರೀ ಕೃಷ್ಣನೋ ಅಥವಾ ವೈಷ್ಣವಿ ಸೇನೆಯೋ ?

ಕುರುಕ್ಷೇತ್ರ ಯುದ್ಧ ನಡೆಯುವುದು ನಿಶ್ಚಯವಾಗಿತ್ತು . ಕೌರವರು ಮತ್ತು ಪಾಂಡವರು ತಿಳಿದಿರೋ ರಾಜ ಮಹಾರಾಜರನ್ನು ಅವರವರ ಪರ ಮಾಡಿ ಅವರವರ ಸೈನ್ಯವನ್ನು ಇನ್ನಷ್ಟು ವಿಸ್ತರಿಸುವ ಪ್ರಯತ್ನದಲ್ಲಿ ಇದ್ದರು. ಶ್ರೀ ಕೃಷ್ಣನ ಹತ್ತಿರ ಶಕ್ತಿಶಾಲಿಯಾದ ವೈಷ್ಣವಿ ಸೇನೆ ಇತ್ತು. ಇಬ್ಬರಿಗೂ ಕೃಷ್ಣನ ಸಹಾಯ ಬೇಕಿತ್ತು.

ದುರ್ಯೋಧನನು ದ್ವಾರಿಕ ನಗರಿಗೆ ಹೋದನು. ಮಧ್ಯಾಹ್ನದ ಸಮಯ, ಕೃಷ್ಣನು ವಿಶ್ರಮಿಸುತ್ತಿದನು. ಕೃಷ್ಣನು ಎದ್ದೇಳುವವರಿಗೂ ಕಾಯುವುದು ತಪ್ಪದು ಎಂದು ದುರ್ಯೋಧನನು ಅರ್ಥ ಮಾಡಿಕೊಂಡನು. ಕೃಷ್ಣನು ಮಲಗಿದ್ದಲ್ಲಿ ಎರಡು ಕುರ್ಚಿಗಳು ಇದ್ದವು. ಒಂದು ಕೃಷ್ಣನ ತಲೆಯ ಹತ್ತಿರ, ಇನ್ನೊಂದು ಕೃಷ್ಣನ ಕಾಲಿನ ಹತ್ತಿರ. ಮುಂದೆ ಚಕ್ರವರ್ತಿ ಆಗುವ ತಾನು ಇನ್ನೊಬರ ಕಾಲಿನ ಹತ್ತಿರ ಕೂರುವುದು ಅನುಚಿತ ಎಂದು ತಲೆಯ ಹತ್ತಿರ ಕುಳಿತ ದುರ್ಯೋಧನ.
ಇದೇ ಸಮಯದಲ್ಲಿ ಪಾಂಡವರ ಕಡೆಯಿಂದ, ಕೃಷ್ಣನ ಆಪ್ತನಾದ, ಅರ್ಜುನ ಬಂದನು . ಅರ್ಜುನ ಕೃಷ್ಣನ ಭಕ್ತನೂ ಹೌದು. ಅವನದು ಅದೇ ಇಚ್ಛೆ - ಕುರುಕ್ಷೇತ್ರದಲ್ಲಿ ಕೃಷ್ಣನ ಸಹಾಯ ಪಡೆಯುವುದು. ನಿಸ್ಸಂಕೋಚವಾಗಿ ಕೃಷ್ಣನ ಕಾಲಿನ ಹತ್ತಿರ ಇದ್ದ ಕುರ್ಚಿಯ ಮೇಲೆ ಕುಳಿತ. ಯುದ್ಧ ಮಾಡಲು ನಿರ್ಧರಿಸಿರುವ ಅಣ್ಣ ತಮ್ಮಂದಿರ ಮಧ್ಯೆ ಬರಿ ಮೌನ.

ಸ್ವಲ್ಪ ಹೊತ್ತಿನ ನಂತರ ಕೃಷ್ಣನು ತನ್ನ ಮಧ್ಯಾಹ್ನದ ನಿದ್ದೆ ಮುಗಿಸಿ ಎದ್ದನು. ಎದ್ದ ತಕ್ಷಣ ಅರ್ಜುನ ಕಾಣಿಸಿದ. ಸಂತೋಷದಿಂದ 'ಅರ್ಜುನ, ಯಾವಾಗ ಬಂದೆ. ಕುಂತಿ ಅತ್ತೆ ಹೇಗಿದ್ದಾರೆ?' ಎಂದನು. ಅರ್ಜುನ ಉತ್ತರಿಸುವ ಮುನ್ನ ದುರ್ಯೋಧನ ಜೋರಾಗಿ 'ಕೃಷ್ಣ! ಮೊದಲು ನಾನು ಬಂದಿದ್ದು, ನನ್ನನ್ನು ಮರೆತಿರುವ ಹಾಗಿದೆ?!'

'ಓಹ್ , ದುರ್ಯೋಧನ! ನೀನು ಬಂದಿರುವುದು ನನಗೆ ಕಾಣಲಿಲ್ಲ. '

'ಕೃಷ್ಣ, ಏನು ತಿಳಿಯದವನಂತೆ ಮಾತಾಡಬೇಡ. ನಾನು ಬಂದಿರುವುದು ಕುರುಕ್ಷೇತ್ರದಲ್ಲಿ ನಿನ್ನ ಸಹಾಯ ಪಡೆಯಲು ಅಂತ ನಿನಗೆ ಚೆನ್ನಾಗಿ ಗೊತ್ತು ' ಎಂದ ದುರ್ಯೋಧನ.

'ನಾನು ಅದೇ ಕೋರಲು ಬಂದೆ, ಕೃಷ್ಣ' ಎಂದ ಅರ್ಜುನ.

'ಸರಿ. ಇಬ್ಬರೂ ನನ್ನ ಬಂಧುಗಳೇ. ಯಾರಿಗೂ ನಿರಾಸೆ ಮಾಡಲು ಇಷ್ಟ ಇಲ್ಲ ನನಗೆ. ಒಂದು ಕಡೆ ನನ್ನ ವೈಷ್ಣವಿ ಸೇನೆ ಇನ್ನೊಂದು ಕಡೆ ನಾನು. ಎರಡರಲ್ಲಿ ಯಾವುದು ಬೇಕೋ ಆರಿಸಿಕೊಳ್ಳಿ. ಆದರೆ ನೆನಪಿರಲಿ ನಾನು ಕುರುಕ್ಷೇತ್ರದಲ್ಲಿ ಒಂದು ಅಸ್ತ್ರವನ್ನುಎತ್ತುವುದಿಲ್ಲ ಕೇವಲ ಒಬ್ಬರ ಪರ ಇರುತ್ತೇನೆ . ' ಎಂದ ಕೃಷ್ಣ .


'ಯಾರು ಬೇಕು? ನನ್ನ ಬೃಹದ್ ವೈಷ್ಣವಿ ಸೇನೆ ಬೇಕೇ ಅಥವಾ ನಾನು ಬೇಕೇ. ಒಂದು ಕಡೆ ನನ್ನ ಸೈನ್ಯದಲ್ಲಿ ಸಾವಿರಾರು ಸೈನಿಕರು ಆನೆಗಳು ಕುದುರೆಗಳು ಇವೆ . ನಡೆದಲ್ಲಿ ಭೂಮಿ ಕಂಪಿಸುವುದು ಅಲ್ಲದೆ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟಿಸುವಂಥ ಸೈನ್ಯ. ಇನ್ನೊಂದು ಕಡೆ ಯುದ್ಧ ಮಾಡಬಾರದೆಂದು ನಿಶ್ಚಯಿಸುರಿವ ನಾನು ಬೇಕೇ. ಪಾರ್ಥ ?' ಎಂದು ಕೃಷ್ಣ ಅರ್ಜುನನ್ನು ಕೇಳಿದ.

'ಕೃಷ್ಣ! ಮೊದಲು ಬಂದಿದ್ದು ನಾನು. ಅದಕ್ಕೆ ಆರಿಸುವ ಮೊದಲ ಅವಕಾಶ ನನಗೆ ಸಿಗಬೇಕು!' ಎಂದು ದುರ್ಯೋಧನ ಗರ್ಜಿಸಿದ.

ಸ್ಥಿತಪ್ರಜ್ಞನಾದ ಶ್ರೀ ಕೃಷ್ಣನು ನಗುತ್ತ 'ದುರ್ಯೋಧನ, ಅರ್ಜುನ ನಿನಗೆ ವಯ್ಯಸ್ಸಿನಲ್ಲಿ ಚಿಕ್ಕವನು. ಚಿಕ್ಕವರ ಆಸೆ ನೆರೆವೇರಿಸುವುದು ದೊಡ್ಡವರ ರೀತಿ ಅಲ್ಲವೇ . ಅದು ಅಲ್ಲದೆ ಎದ್ದ ತಕ್ಷಣ ಮೊದಲು ನನ್ನ ದೃಷ್ಟಿ ಅರ್ಜುನನ ಮೇಲೆ ಬಿತ್ತು . ಹೇಳು ಅರ್ಜುನ, ನಿನಗೆ ನಾನು ಬೇಕೇ ಅಥವಾ ನನ್ನ ಸೈನ್ಯ ಬೇಕೇ ?'

ಥಟ್ಟನೆ ಅರ್ಜುನ ಕೈ ಮುಗಿದು 'ಕೃಷ್ಣ, ನಾನು ಬಂದದ್ದು ನಿನ್ನ ಸಹಾಯ ಕೋರಲು. ನಿನ್ನ ಸೈನ್ಯದ ಸಹಾಯ ಕೊರಲು ಅಲ್ಲ. ನನಗೆ ನೀನೆ ಬೇಕು ನಿನ್ನ ಸೈನ್ಯವಲ್ಲ.'

ದುರ್ಯೋಧನನಿಗೆ ಇದನ್ನು ಕೇಳಿ ಮನಸ್ಸು ನಿರಾಳವಾಯಿತು. 'ಎಂಥ ಮೂರ್ಖ ಅರ್ಜುನ. ಸೈನ್ಯ ಬಿಟ್ಟು ಯುದ್ಧ ಮಾಡದಿರುವ ನಿಶ್ಚಯ ಮಾಡಿದ ಕೃಷ್ಣನನ್ನು ಆರಿಸಿದ' ಅಂತ ಮನಸಿನಲ್ಲಿ ಅಂದುಕೊಂಡು ಹೇಳಿದ - 'ತಮ್ಮ ಅರ್ಜುನ, ನಿನ್ನ ಇಷ್ಟದಂತೆಯೇ ಆಗಲಿ. ಕೃಷ್ಣನ ವೈಷ್ಣವಿ ಸೇನೆ ನಮ್ಮ ಪರ ಇರಲಿ. ಕೃಷ್ಣ ನಿನ್ನ ಪರ ಇರಲಿ' ಎಂದು ದೊಡ್ಡ ಮನಸ್ಸು ಮಾಡಿದವನಂತೆ ಹೇಳಿದ.

----
ಒಂದೇ ಒಂದು ಅಸ್ತ್ರವನ್ನು ಎತ್ತದೆ ಶ್ರೀ ಕೃಷ್ಣನ ಮಾರ್ಗದರ್ಶನದಲ್ಲಿ ಪಾಂಡವರು ಕುರುಕ್ಷೇತ್ರ ಗೆದ್ದರು.
----

ನೀತಿ ಏನಿರಬಹುದು?
೧. ದುರ್ಯೋಧನ ಸಹಾಯ ಕೇಳಲು ಹೋದರೂ ದುರಹಂಕಾರ ಬಿಟ್ಟಿರಲಿಲ್ಲ. ಅವನ ಅಹಂ ಅವನ ಬುದ್ಧಿ ಮಂಕು ಮಾಡಿತ್ತು. ಅಹಂ ಒಳ್ಳೆಯದಲ್ಲವೆನ್ನಬಹುದು.
೨. ಸಾವಿರಾರು ಆನೆ ಕುದುರೆಗಳು ಇದ್ದ ಕೃಷ್ಣನ ಸೈನ್ಯಕ್ಕಿಂತ ಕೃಷ್ಣನ ರಣನೀತಿಯೇ ಮೇಲು. ಅಂದರೆ 'ಶಕ್ತಿಗಿಂತ ಯುಕ್ತಿ ಮೇಲು' ಅನ್ನಬಹುದು.





Monday, June 22, 2020

Stories for kids - 1 - Golden mongoose

ಅರ್ಧ-ಚಿನ್ನದ ಮುಂಗುಸಿ


ಕುರುಕ್ಷೇತ್ರ ಯುದ್ಧ ಗೆದ್ದಮೇಲೆ ಚಕ್ರವರ್ತಿ ಯುಧಿಷ್ಠಿರ ರಾಜಸೂಯ   ಯಜ್ಞ ಮಾಡಿದ. ಅದು ಸಾಧಾರಣ ಯಜ್ಞ ಅಲ್ಲ. ಹಿಂದೆಂದೂ ಮಾಡಿರಲಿಲ್ಲ, ಮುಂದೆಂದೂ ಮಾಡಲು ಸಾಧ್ಯವಿಲ್ಲ.
ಎಲ್ಲಾ ಪ್ರಜೆಗಳಿಗೆ ಭರ್ಜರಿ ಭೋಜನ , ಬಡವರಿಗೆ ಚಿನ್ನದ ನಾಣ್ಯಗಳು, ಶ್ರೀ ಕೃಷ್ಣನೇ ಅದಕ್ಕೆ ಮುಖ್ಯ ಅತಿಥಿ .

ಯುಧಿಷ್ಠಿರನ ಎದೆ ಜಂಭದಿಂದ ಉಬ್ಬಿತ್ತು. ಈ ಸಂದರ್ಭದಲ್ಲಿ ಅಲ್ಲಿ ಒಂದು ವಿಚಿತ್ರ ಘಟನೆ ನಡೀತು.

ಒಂದು ಮುಂಗುಸಿ ಅಲ್ಲಿ ಚಲ್ಲಿದ ಎಂಜಿಲು ಅನ್ನದಮೇಲೆ ಹುರುಳಾಡುತಿತ್ತು . ಇದನ್ನು ನೋಡಿದ ಯುಧಿಷ್ಠಿರ ಮುಂಗುಸಿಯನ್ನು 'ಎಲೆಯ್ ಮುಂಗುಸಿ , ಯಾಕೆ ಹೀಗೆ ಆಡ್ತಿದ್ಯ, ನಿನಗೆ ಹಸಿವಿದ್ದರೆ ನಿಸ್ಸಂಕೋಚವಾಗಿ ಕೇಳು ಊಟ ಹಾಕಿಸುತ್ತೇನೆ ! '
ಆಗಲೇ ಸುಮಾರು ಹೊತ್ತಿನಿಂದ ಹುರುಳಾಡುತಿದ್ದ ಮುಂಗುಸಿ ಮಹಾರಾಜನ ಕಡೆ ನೋಡಿ ಅಯ್ಯೋ-ಪಾಪ ಎನ್ನುವಂತೆ ನಕ್ಕಿತು - 'ಧರ್ಮರಾಜ , ನಿನ್ನ ಯಜ್ಞದ ವಿಚಾರ ತಿಳಿದಾಗ ನಾನು ಓಡೋಡಿ ಬಂದೆ . ಇಗೋ ಇಲ್ಲಿ ನೋಡು ನನ್ನ ಮಯ್ಯಿ ಅರ್ಧ ಚಿನ್ನದ್ದು , ನಿನ್ನ ಮಹಾ ಯಜ್ಞದಿಂದ ನನ್ನ ಮಯ್ಯಿ ಸಂಪೂರ್ಣ ಚಿನ್ನದ್ದು ಆಗಬಹುದು ಎಂದು ತಿಳಿದಿದ್ದೆ . ಆದರೆ ನಿನ್ನ ಯಜ್ಞ ಆ ಬ್ರಾಹ್ಮಣನ ದಾನದ ಮುಂದೆ ಏನು ಇಲ್ಲಾ!'

ಈ ಮಾತಾಡುವ ಮುಂಗುಸಿಯ ಮಾತು ಕೇಳಿ ಗರ ಬಡಿದವಂತೆ ಧರ್ಮರಾಜ ಆಶ್ಚರ್ಯಗೊಂಡನು. ಅದು ಯಾರು ಬ್ರಾಹ್ಮಣ? ಅದೇನು ಅವನು ಮಾಡಿದ ದಾನ? ಅದಕ್ಕೂ ಹೆಚ್ಚಾಗಿ ನನ್ನಂಥ ಚಕ್ರವರ್ತಿಗೂ ಹೆಚ್ಚಿಗೆ ದಾನ ಹೇಗೆ ಮಾಡಲು ಸಾಧ್ಯ ಎಂದು ಆಲೋಚಿಸಿ - 'ಅಯ್ಯಾ ಮುಂಗುಸಿ, ಸ್ವಲ್ಪ ಆ  ಬ್ರಾಹ್ಮಣ ಕಥೆ ಹೇಳುವೆಯ?'. ಮುಂಗುಸಿ ತುಂಬಾ ವರ್ಷಗಳ ಹಿಂದೆ ನಡೆದ ಘಟನೆಯನ್ನು ಹೇಳಲಾರಂಭಿಸಿತು.

ಒಂದು ಭಯಂಕರ ಕ್ಷಾಮ ಬಂದಿತ್ತು. ಊಟ ಇಲ್ಲ, ನೀರೂ ಇಲ್ಲ. ಹೀಗಿರುವಾಗ ಒಂದು ಬ್ರಾಹ್ಮಣ ಅದೇ ಊರಿನಲ್ಲಿ ಅವನ ಪರಿವಾರದೊಂದಿಗೆ ಇದ್ದ. ಅವನು, ಅವನ ಹೆಂಡತಿ, ಒಬ್ಬ ಮಗ ಹಾಗು ಒಬ್ಬಳು ಮಗಳು. ಎಂದಿನಂತೆ ಅವನು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಆದರೆ ಅಂಥ ಕ್ಷಾಮದಲ್ಲಿ ಜನರಿಗೆ ಭಿಕ್ಷೆ ನೀಡಲಿ ಎಲ್ಲಿಂದು ಬಂದೀತು? ಮೂರು ದಿನದಿಂದ ಒಂದು ಚೂರು ಊಟ ಸಿಕ್ಕಿರಲಿಲ್ಲ ಅವನಿಗೆ. ಒಂದು ದಿನ ದೇವರ ದಯೆಯಿಂದ ಒಂದಿಷ್ಟು ಯಾರೋ ಕರುಣಾಳುಗಳು ಇವನ ಅವಸ್ಥೆ ನೋಡಲಾರದೆ ನೀಡಿದ್ದರು. ಸಂತೋಷದಿಂದ ಅದನ್ನು ಅವನು ಮನೆಗೆ ತಂದ. ಥಟ್ಟನೆ ಹೆಂಡತಿ ಅದರಿಂದ ಎಂಟು ಸಣ್ಣ ರೊಟ್ಟಿಗಳನ್ನು ತಟ್ಟಿದಳು. ಇನ್ನೇನು ನಾಲ್ಕು ಜನರು ತಿನ್ನಲು ಆರಂಭಿಸಬೇಕು ಅನ್ನುವಾಗ - 'ಭವತಿ ಭಿಕ್ಷಾಂದೇಹಿ! ಭವತಿ ಭಿಕ್ಷಾಂದೇಹಿ !' ಎಂದು ಕೇಳಿಸಿತು. ನೋಡಿದರೆ ಒಬ್ಬ ಭಿಕ್ಷುಕ , ಅದೆಷ್ಟು ದಿನಗಳಿಂದ ತಿಂದಿಲ್ಲವೋ. 'ಅತಿಥಿ ದೇವೋಭವ' ಎಂದು  ನಂಬಿದ್ದ ಆ ಬ್ರಾಹ್ಮಣನು ಭಿಕ್ಷುಕನನ್ನು ಒಳ ಬರಮಾಡಿಕೊಂಡು ಅವನ  ಪಾಲಿಗೆ ಬಂದ ಎರಡು ರೊಟ್ಟಿಗಳನ್ನು ಕೊಟ್ಟನು. ಎರಡೇ ಕ್ಷಣದಲ್ಲಿ ಅದನ್ನು ತಿಂದು ತುಂಬದ-ಹೊಟ್ಟೆಯ ದೃಷ್ಟಿಯಿಂದ ನೋಡಿದನು. ಎರಡನೇ ಯೋಚನೆ ಇಲ್ಲದೆ ಬ್ರಾಹ್ಮಣನ ಹೆಂಡತಿಯೂ ಅವಳ ಪಾಲಿನ ಎರಡು ರೊಟ್ಟಿಗಳನ್ನು ಕೊಟ್ಟಳು. ಆದರೆ ಹೊಟ್ಟೆ ತುಂಬಲಿಲ್ಲ. ಅಪ್ಪ ಅಮ್ಮನ ಹಾಗೆ ಮಕ್ಕಳು ಕೂಡ ಅವರ ಪಾಲಿನ ರೊಟ್ಟಿಗಳನ್ನು ಕೊಟ್ಟಿಬಿಟ್ಟರು. ಎಂಟು ರೊಟ್ಟಿ ತಿಂದಮೇಲೆ ಆ ಬ್ರಾಹ್ಮಣ ಅತಿ ಪ್ರಸನ್ನ ನಾಗಿ ಬ್ರಾಹ್ಮಣನಿಗೆ ಕೃತಗ್ಯತೆ ತೋರಿದನು.

ಮುಂಗುಸಿ ಮುಂದು ವರೆಯಿತು 'ಅದೇ  ಸಮಯದಲ್ಲಿ ನಾನು ಕೂಡ ಹಸಿದಿದ್ದೆ, ಚೆಲ್ಲಿದ ಚೂರು ರೊಟ್ಟಿಯ ತುಂಡನ್ನು ತಿನ್ನಲು ಹೋದಾಗ  ನನ್ನ ಅರ್ಧ ಮಯ್ಯಿ ಅದನ್ನು ತಾಕೀತು. ಆ ಬ್ರಾಹ್ಮಣನ ತ್ಯಾಗದ ಮಹಿಮೆಯಿಂದ ನನ್ನ ಅರ್ಧ ಮಯ್ಯಿ ಚಿನ್ನದ್ದಾಯಿತು ! ಆವತ್ತಿನಿಂದ ನನ್ನ ಮಿಕ್ಕಿದ ಮಯ್ಯನ್ನು ಚಿನ್ನದ್ದು ಮಾಡಿಕೊಳ್ಳುವ ಆಸೆಯಲ್ಲಿ ದಾನ ಧಾರ್ಮ ನಡಿಯುವೆ ಎಲ್ಲ ಕಡೆಯೂ ಹೋದೆ. ಇಲ್ಲಿಗೂ ಬಂದೆ. ಆದರೆ  ಏನು ಉಪಯೋಗವಿಲ್ಲ.  ಎಲೆಯ್ ರಾಜ ನಿನ್ನ ಯಜ್ಞ ಆ ಬ್ರಾಹ್ಮಣ ಮಾಡಿದ ದಾನದ ಮುಂದೆ ಏನು ಇಲ್ಲಾ!'

ನೀತಿ ಏನಿರಬಹುದು?
೧. ದಾನ ಮಾಡುವಾಗ ಅಹಂ ಎಂಬ ಮನೋಭಾವ ಇರಬಾರದು.
೨. ದಾನ ಮಾಡಲು ಐಶ್ವರ್ಯವಲ್ಲ ಉದಾರ ಮನಸ್ಸು ಬೇಕು.