ಕೌರವರಿಗೆ ಮುಂಚಿನಿಂದಲೂ ಪಾಂಡವರನ್ನು ಕಂಡರೆ ದ್ವೇಷ.
ಮೋಸದಿಂದ ಪಾಂಡವರನ್ನು ಕೊಲ್ಲಬೇಕು ಎಂದು ದುರ್ಯೋಧನನು ಒಂದು ಕುತಂತ್ರ ಮಾಡಿದನು. ಪುರೋಚನ ಎಂಬ ವಾಸ್ತುಶಿಲ್ಪಿಯ ಕೈಯಲ್ಲಿ ಒಂದು ಲಾಕ್ಷಾಗೃಹವನ್ನು ಪಾಂಡವರಿಗೆ ಎಂದೇ ಕಟ್ಟಿಸಿದನು. ಇದು ಸಾಮಾನ್ಯ ಮನೆಯಲ್ಲ. ನೋಡಲು ಕಲ್ಲು - ಇಟಿಕೆ - ಮಣ್ಣಿನಿಂದ ಕಟ್ಟಿರುವ ಹಾಗೆ ಕಾಣುವುದು. ಆದರೆ ಮೇಣದಲ್ಲಿ ಕಟ್ಟಿರುವಂಥ ಮನೆ. ಬೆಂಕಿ ಎಲ್ಲಾದರೂ ಶುರುವಾದರೆ ಇಡೀ ಮನೆಯು ಕೆಲವೇ ನಿಮಿಷಗಳಲ್ಲಿ ಸುಟ್ಟು ಭಸ್ಮವಾಗುವಂಥ ಮನೆ. ಪಾಂಡವರು ಮಲಗಿರುವಾಗ ಮನೆಗೆ ಬೆಂಕಿ ಹಚ್ಚಿಸಿ ಅವರೆಲ್ಲರನ್ನು ಕೊಲ್ಲಬೇಕೆಂದು ದುರ್ಯೋಧನನ ಕುತಂತ್ರ.
ಪಾಂಡವರನ್ನು ಕಂಡರೆ ಪಂಚಪ್ರಾಣ ಎನ್ನುವಂತೆ ದುರ್ಯೋಧನ ಆ ಮನೆಯನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟನು. ಎಂದೂ ತೋರದ ಅಕ್ಕರೆಯಿಂದ ಹೇಳಿದ - 'ಯುಧಿಷ್ಠಿರ! ನಿನಗಾಗಿ ಒಂದು ಉತ್ತಮ ಅರಮನೆಯನ್ನು ವಾರ್ನವತದಲ್ಲಿ ಕಟ್ಟಿಸಿದ್ದೀನಿ. ಎಲ್ಲಾ ಪಾಂಡವರು ಹಾಗು ತಾಯಿ ಕುಂತಿ ಅಲ್ಲಿರಬೇಕು ಎನ್ನುವುದು ನನ್ನ ಆಸೆ. '
ತಮ್ಮನಾದ ದುರ್ಯೋಧನನ ಈ ಮಾತು ಕೇಳಿ ಯುಧಿಷ್ಠಿರನಿಗೆ ಸಂತೋಷವಾಯಿತು. 'ಖಂಡಿತವಾಗಿಯೂ, ಅನುಜ! ನಿನ್ನ ಈ ಕಾಣಿಕೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಕೂಡಲೇ ಹೊರಡುತ್ತೀವಿ !'. ದುರ್ಯೋಧನನ ಮಾತುಗಳಲ್ಲಿ ಇದ್ದ ಕಪಟ ಅವನಿಗೆ ತಿಳಿದಿರಲಿಲ್ಲ.
ದುರ್ಯೋಧನನ ಕುತಂತ್ರ ಚಿಕಪ್ಪನಾದ ವಿಧುರನಿಗೆ ಅರಿವಾಯಿತು. ವಿಧುರನು ಲಾಕ್ಷಾಗೃಹದಿಂದ ಒಂದು ಸುರಂಗ ಮಾರ್ಗವನ್ನು ತೊಡಿಸಿದನು. ಪಾಂಡವರಿಗೆ ಈ ವಿಷಯ ತಿಳಿಸಿದನು.
ಪಾಂಡವರು ಲಾಕ್ಷಾಗೃಹಕ್ಕೆ ಹೋಗಿ ವಾಸಿಸಲು ಆರಂಭಿಸಿದರು. ಪುರೋಚನ, ದುರ್ಯೋಧನ ಹೇಳಿದಂತೆ , ಪಾಂಡವರೆಲ್ಲ ಮಲಗುವ ಸಮಯಕ್ಕೆ ಕಾಯುತ್ತಿದ್ದನು. ಎಲ್ಲರು ಮಲಗಿದಾಗ ಆ ಅರಮನೆಗೆ ಬೆಂಕಿ ಹಚ್ಚಬೇಕು ಎಂದು ಕಾಯುತಿದ್ದನು. ಎಲ್ಲಾ ಪಾಂಡವರು ರಾತ್ರಿ ಮಲಗಿದರೂ ಭೀಮ ಮಲಗುತ್ತಿರಲಿಲ್ಲ.
ಹೀಗೆ ಆರು ತಿಂಗಳಾದರೂ ಒಂದು ರಾತ್ರಿಯೂ ಭೀಮ ಮಲಗಿದ್ದು ಪುರೋಚನ ನೋಡಲೇ ಇಲ್ಲ. ಪಾಂಡವರ ಊಟದಲ್ಲಿ ವಿಷ ಬೆರೆಸಿ ಕೊಲ್ಲಲು ಪ್ರಯತ್ನಿಸಿದನು. ಆದರೆ ಪುನಃ ವಿಧುರನು ಪಾಂಡವರಿಗೆ ಇದನ್ನು ಮುಂಚೆಯೇ ಹೇಳಿದ್ದನು. ಅಂದು ರಾತ್ರಿ ವಿಷದ ಊಟ ಮಾಡಿದವರಂತೆ ನಾಟಕ ಮಾಡಿ ಪಾಂಡವರು ಮಲಗಿದರು. ಭೀಮನು ಮೂರ್ಛೆ ತಪ್ಪಿದವನಂತೆ ನಟಿಸಿದನು. ಇದನ್ನು ನೋಡಿ ಪುರೋಚನ ಕೊನೆಗೂ ಕಾರ್ಯ ಸಫಲವಾಯಿತು ಎಂದು ಮಧ್ಯಪಾನ ಮಾಡಲು ಆರಂಭಿಸಿದನು. ಇದೇ ಒಳ್ಳೆ ಸಮಯ ಎಂದು ತಿಳಿದು ಯುಧಿಷ್ಠಿರನು ಲಾಕ್ಷಾಗೃಹಕ್ಕೆ ಬೆಂಕಿ ಹಚ್ಚಿಸಿ ಎಲ್ಲಾ ತಮ್ಮಂದಿರು ಹಾಗು ತಾಯಿ ಕುಂತಿಯ ಜೊತೆ ಗುಪ್ತ ಸುರಂಗ ಮಾರ್ಗದಲ್ಲಿ ತಪ್ಪಿಸಿಕೊಂಡು ಹೋದನು.
ಅದೇ ರಾತ್ರಿ ಲಾಕ್ಷಾಗೃಹದಲ್ಲಿ ಒಂದು ನಿಷಾದ ಹೆಂಗಸು ಮತ್ತು ಅವಳ ಐದು ಜನ ಮಕ್ಕಳು ಇದ್ದರು. ಲಕ್ಷಾಗೃಹವನ್ನು ಸುಟ್ಟಾಗ ಆ ಹೆಂಗಸು ಅವಳ ಐದು ಜನ ಮಕ್ಕಳು ಸತ್ತುಹೋದರು. ಮರುದಿನ ಬೆಳಿಗ್ಗೆ ಸುಟ್ಟ ಹೆಣಗಳು ಪಾಂಡವರದೇ ಇರಬೇಕು ಎಂದು ತಿಳಿದು ದುರ್ಯೋಧನನು ಅತಿ ಸಂತೋಷ ಪಟ್ಟನು. ಆದರೆ ಎಲ್ಲರ ಮುಂದೆ ಮೊಸಳೆ ಕಣ್ಣೀರು ಹರಿಸಿದನು.
ಪಾಂಡವರು ತಪ್ಪಿಸಿಕೊಂಡ ವಿಷಯ ದುರ್ಯೋಧನನಿಗೆ ಗೊತ್ತಾಗಲಿಲ್ಲ.
---
ಸುರಂಗ ಮಾರ್ಗದಲ್ಲಿ ತಪ್ಪಿಸಿಕೊಂಡ ಪಾಂಡವರು ಕಾಡಿನಲ್ಲಿ ಸ್ವಲ್ಪ ದಿನವಿದ್ದರು . ಇಲ್ಲಿ ಭೀಮ ಹಿಡಂಬಿಯನ್ನು ಭೇಟಿಯಾದನು. ನಂತರ ಪಾಂಡವರು ಪಾಂಚಾಲ ರಾಜ್ಯದಲ್ಲಿ ನಡೆದ ಸ್ವಯಂವರದಲ್ಲಿ ದ್ರೌಪಾದಿಯನ್ನು ಮದುವೆಯಾದರು.
---
ಏನಿರಬಹುದು ನೀತಿ?
೧. 'ಅತಿ ವಿನಯಂ ಧೂರ್ತ ಲಕ್ಷಣಂ' . ಸದಾ ಪಾಂಡರಿಗೆ ಕೇಡು ಬಯಸುವ ದುರ್ಯೋಧನನು ಇದ್ದಕ್ಕಿದ್ದ ಹಾಗೆ ಒಂದು ಅರಮನೆ ಕಾಣಿಕೆ ಕೊಟ್ಟು ಎಂದೂ ತೋರದ ಪ್ರೀತಿ ವಾತ್ಸಲ್ಯ ತೋರಿದಾಗಲೇ ಯುಧಿಷ್ಠಿರನಿಗೆ ಅನುಮಾನ ಬರಬೇಕಿತ್ತು. ವಿಧುರನು ದುರ್ಯೋಧನನ ವಿಚಿತ್ರ ನಡುವಳಿಕೆ ನೋಡಿ ಗುಪ್ತಚರಿಗಳ ಮೂಲಕ ಅವನ ಕುತಂತ್ರ ತಿಳಿದುಕೊಂಡಿದ್ದು.
೨. 'ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವೂ ತಿಳಿವುದು!' ದುರ್ಯೋಧನ ಕೇವಲ ಸುಟ್ಟ ಹೆಣಗಳಿಂದ ಅದು ಪಾಂಡವರದೇ ಇರಬೇಕೆಂದು ತಿಳಿದನು. ಒಂದು ಸಾರಿ ನಿಧಾನವಾಗಿ ಯೋಚಿಸಿದ್ದರೆ ಖಚಿತಗೊಳಿಸಲು ಇನ್ನೂ ಹೆಚ್ಚಿಗೆ ಪರೀಕ್ಷೆ ಮಾಡಿಸಬಹುದಿತ್ತು. ಪರೀಕ್ಷೆ ಮಾಡಿದ್ದರೆ ಅಲ್ಲಿದ್ದ ಸುರಂಗ ಮಾರ್ಗ ಕಾಣಿರುತ್ತಿತ್ತು!!
No comments:
Post a Comment