ಶ್ರೀ ಕೃಷ್ಣನೋ ಅಥವಾ ವೈಷ್ಣವಿ ಸೇನೆಯೋ ?
ಕುರುಕ್ಷೇತ್ರ ಯುದ್ಧ ನಡೆಯುವುದು ನಿಶ್ಚಯವಾಗಿತ್ತು . ಕೌರವರು ಮತ್ತು ಪಾಂಡವರು ತಿಳಿದಿರೋ ರಾಜ ಮಹಾರಾಜರನ್ನು ಅವರವರ ಪರ ಮಾಡಿ ಅವರವರ ಸೈನ್ಯವನ್ನು ಇನ್ನಷ್ಟು ವಿಸ್ತರಿಸುವ ಪ್ರಯತ್ನದಲ್ಲಿ ಇದ್ದರು. ಶ್ರೀ ಕೃಷ್ಣನ ಹತ್ತಿರ ಶಕ್ತಿಶಾಲಿಯಾದ ವೈಷ್ಣವಿ ಸೇನೆ ಇತ್ತು. ಇಬ್ಬರಿಗೂ ಕೃಷ್ಣನ ಸಹಾಯ ಬೇಕಿತ್ತು.
ದುರ್ಯೋಧನನು ದ್ವಾರಿಕ ನಗರಿಗೆ ಹೋದನು. ಮಧ್ಯಾಹ್ನದ ಸಮಯ, ಕೃಷ್ಣನು ವಿಶ್ರಮಿಸುತ್ತಿದನು. ಕೃಷ್ಣನು ಎದ್ದೇಳುವವರಿಗೂ ಕಾಯುವುದು ತಪ್ಪದು ಎಂದು ದುರ್ಯೋಧನನು ಅರ್ಥ ಮಾಡಿಕೊಂಡನು. ಕೃಷ್ಣನು ಮಲಗಿದ್ದಲ್ಲಿ ಎರಡು ಕುರ್ಚಿಗಳು ಇದ್ದವು. ಒಂದು ಕೃಷ್ಣನ ತಲೆಯ ಹತ್ತಿರ, ಇನ್ನೊಂದು ಕೃಷ್ಣನ ಕಾಲಿನ ಹತ್ತಿರ. ಮುಂದೆ ಚಕ್ರವರ್ತಿ ಆಗುವ ತಾನು ಇನ್ನೊಬರ ಕಾಲಿನ ಹತ್ತಿರ ಕೂರುವುದು ಅನುಚಿತ ಎಂದು ತಲೆಯ ಹತ್ತಿರ ಕುಳಿತ ದುರ್ಯೋಧನ.
ಇದೇ ಸಮಯದಲ್ಲಿ ಪಾಂಡವರ ಕಡೆಯಿಂದ, ಕೃಷ್ಣನ ಆಪ್ತನಾದ, ಅರ್ಜುನ ಬಂದನು . ಅರ್ಜುನ ಕೃಷ್ಣನ ಭಕ್ತನೂ ಹೌದು. ಅವನದು ಅದೇ ಇಚ್ಛೆ - ಕುರುಕ್ಷೇತ್ರದಲ್ಲಿ ಕೃಷ್ಣನ ಸಹಾಯ ಪಡೆಯುವುದು. ನಿಸ್ಸಂಕೋಚವಾಗಿ ಕೃಷ್ಣನ ಕಾಲಿನ ಹತ್ತಿರ ಇದ್ದ ಕುರ್ಚಿಯ ಮೇಲೆ ಕುಳಿತ. ಯುದ್ಧ ಮಾಡಲು ನಿರ್ಧರಿಸಿರುವ ಅಣ್ಣ ತಮ್ಮಂದಿರ ಮಧ್ಯೆ ಬರಿ ಮೌನ.
ಸ್ವಲ್ಪ ಹೊತ್ತಿನ ನಂತರ ಕೃಷ್ಣನು ತನ್ನ ಮಧ್ಯಾಹ್ನದ ನಿದ್ದೆ ಮುಗಿಸಿ ಎದ್ದನು. ಎದ್ದ ತಕ್ಷಣ ಅರ್ಜುನ ಕಾಣಿಸಿದ. ಸಂತೋಷದಿಂದ 'ಅರ್ಜುನ, ಯಾವಾಗ ಬಂದೆ. ಕುಂತಿ ಅತ್ತೆ ಹೇಗಿದ್ದಾರೆ?' ಎಂದನು. ಅರ್ಜುನ ಉತ್ತರಿಸುವ ಮುನ್ನ ದುರ್ಯೋಧನ ಜೋರಾಗಿ 'ಕೃಷ್ಣ! ಮೊದಲು ನಾನು ಬಂದಿದ್ದು, ನನ್ನನ್ನು ಮರೆತಿರುವ ಹಾಗಿದೆ?!'
'ಓಹ್ , ದುರ್ಯೋಧನ! ನೀನು ಬಂದಿರುವುದು ನನಗೆ ಕಾಣಲಿಲ್ಲ. '
'ಕೃಷ್ಣ, ಏನು ತಿಳಿಯದವನಂತೆ ಮಾತಾಡಬೇಡ. ನಾನು ಬಂದಿರುವುದು ಕುರುಕ್ಷೇತ್ರದಲ್ಲಿ ನಿನ್ನ ಸಹಾಯ ಪಡೆಯಲು ಅಂತ ನಿನಗೆ ಚೆನ್ನಾಗಿ ಗೊತ್ತು ' ಎಂದ ದುರ್ಯೋಧನ.
'ನಾನು ಅದೇ ಕೋರಲು ಬಂದೆ, ಕೃಷ್ಣ' ಎಂದ ಅರ್ಜುನ.
'ಸರಿ. ಇಬ್ಬರೂ ನನ್ನ ಬಂಧುಗಳೇ. ಯಾರಿಗೂ ನಿರಾಸೆ ಮಾಡಲು ಇಷ್ಟ ಇಲ್ಲ ನನಗೆ. ಒಂದು ಕಡೆ ನನ್ನ ವೈಷ್ಣವಿ ಸೇನೆ ಇನ್ನೊಂದು ಕಡೆ ನಾನು. ಎರಡರಲ್ಲಿ ಯಾವುದು ಬೇಕೋ ಆರಿಸಿಕೊಳ್ಳಿ. ಆದರೆ ನೆನಪಿರಲಿ ನಾನು ಕುರುಕ್ಷೇತ್ರದಲ್ಲಿ ಒಂದು ಅಸ್ತ್ರವನ್ನುಎತ್ತುವುದಿಲ್ಲ ಕೇವಲ ಒಬ್ಬರ ಪರ ಇರುತ್ತೇನೆ . ' ಎಂದ ಕೃಷ್ಣ .
'ಯಾರು ಬೇಕು? ನನ್ನ ಬೃಹದ್ ವೈಷ್ಣವಿ ಸೇನೆ ಬೇಕೇ ಅಥವಾ ನಾನು ಬೇಕೇ. ಒಂದು ಕಡೆ ನನ್ನ ಸೈನ್ಯದಲ್ಲಿ ಸಾವಿರಾರು ಸೈನಿಕರು ಆನೆಗಳು ಕುದುರೆಗಳು ಇವೆ . ನಡೆದಲ್ಲಿ ಭೂಮಿ ಕಂಪಿಸುವುದು ಅಲ್ಲದೆ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟಿಸುವಂಥ ಸೈನ್ಯ. ಇನ್ನೊಂದು ಕಡೆ ಯುದ್ಧ ಮಾಡಬಾರದೆಂದು ನಿಶ್ಚಯಿಸುರಿವ ನಾನು ಬೇಕೇ. ಪಾರ್ಥ ?' ಎಂದು ಕೃಷ್ಣ ಅರ್ಜುನನ್ನು ಕೇಳಿದ.
'ಕೃಷ್ಣ! ಮೊದಲು ಬಂದಿದ್ದು ನಾನು. ಅದಕ್ಕೆ ಆರಿಸುವ ಮೊದಲ ಅವಕಾಶ ನನಗೆ ಸಿಗಬೇಕು!' ಎಂದು ದುರ್ಯೋಧನ ಗರ್ಜಿಸಿದ.
ಸ್ಥಿತಪ್ರಜ್ಞನಾದ ಶ್ರೀ ಕೃಷ್ಣನು ನಗುತ್ತ 'ದುರ್ಯೋಧನ, ಅರ್ಜುನ ನಿನಗೆ ವಯ್ಯಸ್ಸಿನಲ್ಲಿ ಚಿಕ್ಕವನು. ಚಿಕ್ಕವರ ಆಸೆ ನೆರೆವೇರಿಸುವುದು ದೊಡ್ಡವರ ರೀತಿ ಅಲ್ಲವೇ . ಅದು ಅಲ್ಲದೆ ಎದ್ದ ತಕ್ಷಣ ಮೊದಲು ನನ್ನ ದೃಷ್ಟಿ ಅರ್ಜುನನ ಮೇಲೆ ಬಿತ್ತು . ಹೇಳು ಅರ್ಜುನ, ನಿನಗೆ ನಾನು ಬೇಕೇ ಅಥವಾ ನನ್ನ ಸೈನ್ಯ ಬೇಕೇ ?'
ಥಟ್ಟನೆ ಅರ್ಜುನ ಕೈ ಮುಗಿದು 'ಕೃಷ್ಣ, ನಾನು ಬಂದದ್ದು ನಿನ್ನ ಸಹಾಯ ಕೋರಲು. ನಿನ್ನ ಸೈನ್ಯದ ಸಹಾಯ ಕೊರಲು ಅಲ್ಲ. ನನಗೆ ನೀನೆ ಬೇಕು ನಿನ್ನ ಸೈನ್ಯವಲ್ಲ.'
ದುರ್ಯೋಧನನಿಗೆ ಇದನ್ನು ಕೇಳಿ ಮನಸ್ಸು ನಿರಾಳವಾಯಿತು. 'ಎಂಥ ಮೂರ್ಖ ಅರ್ಜುನ. ಸೈನ್ಯ ಬಿಟ್ಟು ಯುದ್ಧ ಮಾಡದಿರುವ ನಿಶ್ಚಯ ಮಾಡಿದ ಕೃಷ್ಣನನ್ನು ಆರಿಸಿದ' ಅಂತ ಮನಸಿನಲ್ಲಿ ಅಂದುಕೊಂಡು ಹೇಳಿದ - 'ತಮ್ಮ ಅರ್ಜುನ, ನಿನ್ನ ಇಷ್ಟದಂತೆಯೇ ಆಗಲಿ. ಕೃಷ್ಣನ ವೈಷ್ಣವಿ ಸೇನೆ ನಮ್ಮ ಪರ ಇರಲಿ. ಕೃಷ್ಣ ನಿನ್ನ ಪರ ಇರಲಿ' ಎಂದು ದೊಡ್ಡ ಮನಸ್ಸು ಮಾಡಿದವನಂತೆ ಹೇಳಿದ.
----
ಒಂದೇ ಒಂದು ಅಸ್ತ್ರವನ್ನು ಎತ್ತದೆ ಶ್ರೀ ಕೃಷ್ಣನ ಮಾರ್ಗದರ್ಶನದಲ್ಲಿ ಪಾಂಡವರು ಕುರುಕ್ಷೇತ್ರ ಗೆದ್ದರು.
----
ನೀತಿ ಏನಿರಬಹುದು?
೧. ದುರ್ಯೋಧನ ಸಹಾಯ ಕೇಳಲು ಹೋದರೂ ದುರಹಂಕಾರ ಬಿಟ್ಟಿರಲಿಲ್ಲ. ಅವನ ಅಹಂ ಅವನ ಬುದ್ಧಿ ಮಂಕು ಮಾಡಿತ್ತು. ಅಹಂ ಒಳ್ಳೆಯದಲ್ಲವೆನ್ನಬಹುದು.
೨. ಸಾವಿರಾರು ಆನೆ ಕುದುರೆಗಳು ಇದ್ದ ಕೃಷ್ಣನ ಸೈನ್ಯಕ್ಕಿಂತ ಕೃಷ್ಣನ ರಣನೀತಿಯೇ ಮೇಲು. ಅಂದರೆ 'ಶಕ್ತಿಗಿಂತ ಯುಕ್ತಿ ಮೇಲು' ಅನ್ನಬಹುದು.
No comments:
Post a Comment