Monday, June 22, 2020

Stories for kids - 1 - Golden mongoose

ಅರ್ಧ-ಚಿನ್ನದ ಮುಂಗುಸಿ


ಕುರುಕ್ಷೇತ್ರ ಯುದ್ಧ ಗೆದ್ದಮೇಲೆ ಚಕ್ರವರ್ತಿ ಯುಧಿಷ್ಠಿರ ರಾಜಸೂಯ   ಯಜ್ಞ ಮಾಡಿದ. ಅದು ಸಾಧಾರಣ ಯಜ್ಞ ಅಲ್ಲ. ಹಿಂದೆಂದೂ ಮಾಡಿರಲಿಲ್ಲ, ಮುಂದೆಂದೂ ಮಾಡಲು ಸಾಧ್ಯವಿಲ್ಲ.
ಎಲ್ಲಾ ಪ್ರಜೆಗಳಿಗೆ ಭರ್ಜರಿ ಭೋಜನ , ಬಡವರಿಗೆ ಚಿನ್ನದ ನಾಣ್ಯಗಳು, ಶ್ರೀ ಕೃಷ್ಣನೇ ಅದಕ್ಕೆ ಮುಖ್ಯ ಅತಿಥಿ .

ಯುಧಿಷ್ಠಿರನ ಎದೆ ಜಂಭದಿಂದ ಉಬ್ಬಿತ್ತು. ಈ ಸಂದರ್ಭದಲ್ಲಿ ಅಲ್ಲಿ ಒಂದು ವಿಚಿತ್ರ ಘಟನೆ ನಡೀತು.

ಒಂದು ಮುಂಗುಸಿ ಅಲ್ಲಿ ಚಲ್ಲಿದ ಎಂಜಿಲು ಅನ್ನದಮೇಲೆ ಹುರುಳಾಡುತಿತ್ತು . ಇದನ್ನು ನೋಡಿದ ಯುಧಿಷ್ಠಿರ ಮುಂಗುಸಿಯನ್ನು 'ಎಲೆಯ್ ಮುಂಗುಸಿ , ಯಾಕೆ ಹೀಗೆ ಆಡ್ತಿದ್ಯ, ನಿನಗೆ ಹಸಿವಿದ್ದರೆ ನಿಸ್ಸಂಕೋಚವಾಗಿ ಕೇಳು ಊಟ ಹಾಕಿಸುತ್ತೇನೆ ! '
ಆಗಲೇ ಸುಮಾರು ಹೊತ್ತಿನಿಂದ ಹುರುಳಾಡುತಿದ್ದ ಮುಂಗುಸಿ ಮಹಾರಾಜನ ಕಡೆ ನೋಡಿ ಅಯ್ಯೋ-ಪಾಪ ಎನ್ನುವಂತೆ ನಕ್ಕಿತು - 'ಧರ್ಮರಾಜ , ನಿನ್ನ ಯಜ್ಞದ ವಿಚಾರ ತಿಳಿದಾಗ ನಾನು ಓಡೋಡಿ ಬಂದೆ . ಇಗೋ ಇಲ್ಲಿ ನೋಡು ನನ್ನ ಮಯ್ಯಿ ಅರ್ಧ ಚಿನ್ನದ್ದು , ನಿನ್ನ ಮಹಾ ಯಜ್ಞದಿಂದ ನನ್ನ ಮಯ್ಯಿ ಸಂಪೂರ್ಣ ಚಿನ್ನದ್ದು ಆಗಬಹುದು ಎಂದು ತಿಳಿದಿದ್ದೆ . ಆದರೆ ನಿನ್ನ ಯಜ್ಞ ಆ ಬ್ರಾಹ್ಮಣನ ದಾನದ ಮುಂದೆ ಏನು ಇಲ್ಲಾ!'

ಈ ಮಾತಾಡುವ ಮುಂಗುಸಿಯ ಮಾತು ಕೇಳಿ ಗರ ಬಡಿದವಂತೆ ಧರ್ಮರಾಜ ಆಶ್ಚರ್ಯಗೊಂಡನು. ಅದು ಯಾರು ಬ್ರಾಹ್ಮಣ? ಅದೇನು ಅವನು ಮಾಡಿದ ದಾನ? ಅದಕ್ಕೂ ಹೆಚ್ಚಾಗಿ ನನ್ನಂಥ ಚಕ್ರವರ್ತಿಗೂ ಹೆಚ್ಚಿಗೆ ದಾನ ಹೇಗೆ ಮಾಡಲು ಸಾಧ್ಯ ಎಂದು ಆಲೋಚಿಸಿ - 'ಅಯ್ಯಾ ಮುಂಗುಸಿ, ಸ್ವಲ್ಪ ಆ  ಬ್ರಾಹ್ಮಣ ಕಥೆ ಹೇಳುವೆಯ?'. ಮುಂಗುಸಿ ತುಂಬಾ ವರ್ಷಗಳ ಹಿಂದೆ ನಡೆದ ಘಟನೆಯನ್ನು ಹೇಳಲಾರಂಭಿಸಿತು.

ಒಂದು ಭಯಂಕರ ಕ್ಷಾಮ ಬಂದಿತ್ತು. ಊಟ ಇಲ್ಲ, ನೀರೂ ಇಲ್ಲ. ಹೀಗಿರುವಾಗ ಒಂದು ಬ್ರಾಹ್ಮಣ ಅದೇ ಊರಿನಲ್ಲಿ ಅವನ ಪರಿವಾರದೊಂದಿಗೆ ಇದ್ದ. ಅವನು, ಅವನ ಹೆಂಡತಿ, ಒಬ್ಬ ಮಗ ಹಾಗು ಒಬ್ಬಳು ಮಗಳು. ಎಂದಿನಂತೆ ಅವನು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಆದರೆ ಅಂಥ ಕ್ಷಾಮದಲ್ಲಿ ಜನರಿಗೆ ಭಿಕ್ಷೆ ನೀಡಲಿ ಎಲ್ಲಿಂದು ಬಂದೀತು? ಮೂರು ದಿನದಿಂದ ಒಂದು ಚೂರು ಊಟ ಸಿಕ್ಕಿರಲಿಲ್ಲ ಅವನಿಗೆ. ಒಂದು ದಿನ ದೇವರ ದಯೆಯಿಂದ ಒಂದಿಷ್ಟು ಯಾರೋ ಕರುಣಾಳುಗಳು ಇವನ ಅವಸ್ಥೆ ನೋಡಲಾರದೆ ನೀಡಿದ್ದರು. ಸಂತೋಷದಿಂದ ಅದನ್ನು ಅವನು ಮನೆಗೆ ತಂದ. ಥಟ್ಟನೆ ಹೆಂಡತಿ ಅದರಿಂದ ಎಂಟು ಸಣ್ಣ ರೊಟ್ಟಿಗಳನ್ನು ತಟ್ಟಿದಳು. ಇನ್ನೇನು ನಾಲ್ಕು ಜನರು ತಿನ್ನಲು ಆರಂಭಿಸಬೇಕು ಅನ್ನುವಾಗ - 'ಭವತಿ ಭಿಕ್ಷಾಂದೇಹಿ! ಭವತಿ ಭಿಕ್ಷಾಂದೇಹಿ !' ಎಂದು ಕೇಳಿಸಿತು. ನೋಡಿದರೆ ಒಬ್ಬ ಭಿಕ್ಷುಕ , ಅದೆಷ್ಟು ದಿನಗಳಿಂದ ತಿಂದಿಲ್ಲವೋ. 'ಅತಿಥಿ ದೇವೋಭವ' ಎಂದು  ನಂಬಿದ್ದ ಆ ಬ್ರಾಹ್ಮಣನು ಭಿಕ್ಷುಕನನ್ನು ಒಳ ಬರಮಾಡಿಕೊಂಡು ಅವನ  ಪಾಲಿಗೆ ಬಂದ ಎರಡು ರೊಟ್ಟಿಗಳನ್ನು ಕೊಟ್ಟನು. ಎರಡೇ ಕ್ಷಣದಲ್ಲಿ ಅದನ್ನು ತಿಂದು ತುಂಬದ-ಹೊಟ್ಟೆಯ ದೃಷ್ಟಿಯಿಂದ ನೋಡಿದನು. ಎರಡನೇ ಯೋಚನೆ ಇಲ್ಲದೆ ಬ್ರಾಹ್ಮಣನ ಹೆಂಡತಿಯೂ ಅವಳ ಪಾಲಿನ ಎರಡು ರೊಟ್ಟಿಗಳನ್ನು ಕೊಟ್ಟಳು. ಆದರೆ ಹೊಟ್ಟೆ ತುಂಬಲಿಲ್ಲ. ಅಪ್ಪ ಅಮ್ಮನ ಹಾಗೆ ಮಕ್ಕಳು ಕೂಡ ಅವರ ಪಾಲಿನ ರೊಟ್ಟಿಗಳನ್ನು ಕೊಟ್ಟಿಬಿಟ್ಟರು. ಎಂಟು ರೊಟ್ಟಿ ತಿಂದಮೇಲೆ ಆ ಬ್ರಾಹ್ಮಣ ಅತಿ ಪ್ರಸನ್ನ ನಾಗಿ ಬ್ರಾಹ್ಮಣನಿಗೆ ಕೃತಗ್ಯತೆ ತೋರಿದನು.

ಮುಂಗುಸಿ ಮುಂದು ವರೆಯಿತು 'ಅದೇ  ಸಮಯದಲ್ಲಿ ನಾನು ಕೂಡ ಹಸಿದಿದ್ದೆ, ಚೆಲ್ಲಿದ ಚೂರು ರೊಟ್ಟಿಯ ತುಂಡನ್ನು ತಿನ್ನಲು ಹೋದಾಗ  ನನ್ನ ಅರ್ಧ ಮಯ್ಯಿ ಅದನ್ನು ತಾಕೀತು. ಆ ಬ್ರಾಹ್ಮಣನ ತ್ಯಾಗದ ಮಹಿಮೆಯಿಂದ ನನ್ನ ಅರ್ಧ ಮಯ್ಯಿ ಚಿನ್ನದ್ದಾಯಿತು ! ಆವತ್ತಿನಿಂದ ನನ್ನ ಮಿಕ್ಕಿದ ಮಯ್ಯನ್ನು ಚಿನ್ನದ್ದು ಮಾಡಿಕೊಳ್ಳುವ ಆಸೆಯಲ್ಲಿ ದಾನ ಧಾರ್ಮ ನಡಿಯುವೆ ಎಲ್ಲ ಕಡೆಯೂ ಹೋದೆ. ಇಲ್ಲಿಗೂ ಬಂದೆ. ಆದರೆ  ಏನು ಉಪಯೋಗವಿಲ್ಲ.  ಎಲೆಯ್ ರಾಜ ನಿನ್ನ ಯಜ್ಞ ಆ ಬ್ರಾಹ್ಮಣ ಮಾಡಿದ ದಾನದ ಮುಂದೆ ಏನು ಇಲ್ಲಾ!'

ನೀತಿ ಏನಿರಬಹುದು?
೧. ದಾನ ಮಾಡುವಾಗ ಅಹಂ ಎಂಬ ಮನೋಭಾವ ಇರಬಾರದು.
೨. ದಾನ ಮಾಡಲು ಐಶ್ವರ್ಯವಲ್ಲ ಉದಾರ ಮನಸ್ಸು ಬೇಕು.

No comments:

Post a Comment