Friday, June 26, 2020

Stories for kids - 5 - Virata Parva

ವಿರಾಟ ಪರ್ವ 

ಪಗಡೆಯಾಟದಲ್ಲಿ ಸೋತ ಯುಧಿಷ್ಠಿರನು ತಮ್ಮಂದಿರು ಹಾಗು ಹೆಂಡತಿಯ ಜೊತೆಯಲ್ಲಿ ೧೨ ವರ್ಷ ವನವಾಸ, ಆದ ನಂತರ ೧ ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ಅಜ್ಞಾತವಾಸ ಎಂದರೆ ಯಾರಿಗೂ ಪಾಂಡವರು ಎಲ್ಲಿದ್ದಾರೆ ಎನ್ನುವುದು ಗೊತ್ತಾಗಬಾರದು. ಗೊತ್ತಾದರೆ ಮತ್ತೆ ೧೨ವರ್ಷ ವನವಾಸ ಅನುಭವಿಸಬೇಕು. 

ಪಾಂಡವರು ತಮ್ಮ ಅಜ್ಞಾತ ವಾಸವನ್ನು ಮತ್ಸ್ಯ ರಾಜ್ಯದಲ್ಲಿ ವಿರಾಟ ರಾಜನ ಸೇವಕರಾಗಿ ಕಳೆದರು. ಯುಧಿಷ್ಠಿರ 'ಕಂಕ'ನಾಗಿ ರಾಜನ ಆಸ್ಥಾನ ಸೇರಿದ. ಭೀಮ 'ವಲ್ಲಭ'ನಾಗಿ ಅಡಿಗೆ ಭಟ್ಟನಾಗಿ ಸೇರಿದ. ಅರ್ಜುನ 'ಬೃಹನ್ನಳೆ'ಯಾಗಿ ರಾಜನ ಮಗಳಿಗೆ ನೃತ್ಯ ಹೇಳಿಕೊಡುತ್ತಿದ್ದ. ದ್ರೌಪದಿಯು 'ಮಾಲಿನಿ'ಯಾಗಿ ರಾಣಿಯ ಸೈರಂಧ್ರಿಯಾಗಿ ಇದ್ದಳು. 

ಅಜ್ಞಾತವಾಸದ ವರ್ಷದ ಕೊನೆಯ ತಿಂಗಳು ಬಂತು. ದುರ್ಯೋಧನನಿಗೆ ಏನಾದರೂ ಮಾಡಿ ಪಾಂಡವರನ್ನು ಕಂಡುಹಿಡಿಯಬೇಕು. ಪುನಃ ೧೨ ವರ್ಷ ವನವಾಸಕ್ಕೆ ಕಳಿಸಬೇಕು ಎಂದು ಎಲ್ಲಾ ಕಡೆ ಅವನ ಗುಪ್ತಚರಿಗಳನ್ನು ಕಳಿಸಿದನು. ಆದರೆ ಯಾರಿಗೂ ಪಾಂಡವರೆಲ್ಲಿ ಎನ್ನುವುದು ತಿಳಿಯಲಿಲ್ಲ. ಭೀಷ್ಮ, ವಿಧುರ,ಕ್ರಿಪಾ , ದ್ರೋಣರ ಸಲಹೆ ಕೂಡ ಕೇಳಿದ ದುರ್ಯೋಧನ. ಭೀಷ್ಮ ಪಾಂಡವರ ಜೊತೆ ಯುದ್ಧ ತಪ್ಪು ಅಂತ ಹೇಳಿ ಅವರನ್ನು ಕೊಂಡಾಡಲು ಶುರು ಮಾಡಿದ. ಬಾಯಲ್ಲಿ ಇದ್ದ ರೊಟ್ಟಿಯನ್ನು ಮರೆತು ಹಾಡುವ ಕಾಗೆಯಂತೆ, ಭೀಷ್ಮ ಹೇಳಿದ - 'ಪಾಂಡವರು ಎಲ್ಲಿರುವರೋ ಆ ರಾಜ್ಯ ಹೋದ ವರ್ಷದಲ್ಲಿ ತುಂಬಾ ಅಭಿವೃದ್ಧಿ ಆಗಿರುತ್ತೆ' ಅಂತ. ಈ ಮಾತನ್ನು ಕೇಳಿದ ದುರ್ಯೋಧನನ ಮಿತ್ರ ತ್ರಿಗತ ದೇಶದ ರಾಜ ಸುಶರ್ಮಾ. ಪಕ್ಕದ ಮತ್ಸ್ಯ ದೇಶ ಆಕಸ್ಮಿಕವಾಗಿ ಹೋದ ವರ್ಷದಲ್ಲಿ ತುಂಬಾ ಅಭಿವೃದ್ಧಿ ನೋಡಿತ್ತು.  ಪಾಂಡವರು ಮತ್ಸ್ಯ ರಾಜ್ಯದಲ್ಲಿರಬಹುದು ಎಂದು ಊಹೆ ಮಾಡಿ ದುರ್ಯೋಧನನಿಗೆ ವಿರಾಟ ರಾಜನಮೇಲೆ ದಂಡೆತ್ತಿ ಹೋಗುವಂತೆ ಹೇಳಿದ. 

ಹಾಗೆಯೇ ದುರ್ಯೋಧನನು ಮತ್ಸ್ಯ ದೇಶದಮೇಲೆ ಯುದ್ಧಕ್ಕೆ ಹೋದನು. ಅದಕ್ಕೂ ಮುಂಚೆ ತ್ರಿಗತ ರಾಜ ಸುಶರ್ಮ ಮತ್ಸ್ಯ ದೇಶದಮೇಲೆ ಇನ್ನೊಂದು ಕಡೆಯಿಂದ ಆಕ್ರಮಿಸಿದನು. ಹೀಗಾಗಿ ದುರ್ಯೋಧನನ್ನು ಎದುರಿಸಲು ಯಾರೂ ಇರಲಿಲ್ಲ. ವಿರಾಟನ ಮಗ ಉತ್ತರ ಕುಮಾರನು ಹೊರಟನು. 

ಎಂದೂ ರಣಭೂಮಿಯನ್ನು ನೋಡದ ಉತ್ತರ ಕುಮಾರ ದ್ರೌಪಾದಿಯ ಸಲಹೆಯಂತೆ ಬೃಹನ್ನಳೆಯನ್ನು ಸಾರಥಿಯಂತೆ ಕರೆದುಕೊಂಡು ಹೋದನು. 

ರಣ ಭೂಮಿಗೆ ಹೋದರೆ ಎದುರಲ್ಲಿ ಭೀಷ್ಮ, ದ್ರೋಣ, ಕರ್ಣ,ದುರ್ಯೋಧನನಂತಹ ಮಹಾರಥಿಗಳು. ಕೊನೆ ಕಾಣದಷ್ಟು ದೊಡ್ಡ ಸೈನ್ಯ. ಉತ್ತರ ಕುಮಾರನ ಎದೆಯು ಅತಿ ಜೋರಾಗಿ ಬಡಿದುಕೊಳ್ಳಲು ಶುರುವಾಯಿತು. ಓಡಿಹೋಗೋದೆ ಒಳ್ಳೇದು ಎಂದು ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನನ್ನು ರಥ ಹಿಂದಕ್ಕೆ ತಿರುಗಿಸಲು ಹೇಳಿದ. 

'ಹೇಡಿ ಎನ್ನಿಸಿಕೊಳ್ಳಬೇಡ, ವೀರ. ಯುದ್ಧ ಮಾಡು!' ಎಂದ ಬೃಹನ್ನಳೆ. 

ತರ್ಕ ಬದ್ಧವಾಗಿ ಯೋಚನೆ, ಸಂಭಾಷಣೆ ಮಾಡುವ ಸ್ಥಿತಿಯಲ್ಲಿಲ್ಲದ ಉತ್ತರ ಕುಮಾರನು ರಥ ಇಳಿದು ಓಡಿ  ಹೋದನು. ಆದರೆ ಅರ್ಜುನ ಅವನನ್ನು ಹಿಡಿದು ಮತ್ತೆ ರಥದಲ್ಲಿ ನಿಲ್ಲಿಸಿದ. ಇವನ ಕೈಯಲ್ಲಿ ಆಗುವುದಿಲ್ಲ ಎಂದು ತಿಳಿದು ಅರ್ಜುನ ಉತ್ತರ ಕುಮಾರನಿಗೆ ರಥದ ಸಾರಥಿಯಾಗಲು ಹೇಳಿದ. ಅಜ್ಞಾತವಾಸದ ಮುನ್ನ ಪಾಂಡವರು ಅಸ್ತ್ರ ಶಸ್ತ್ರಗಳನ್ನು  ಒಂದು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದರು. ಆ ಮರದ ಕಡೆಗೆ ಹೋಗಲು ಆದೇಶಿಸಿದ ಅರ್ಜುನ. ಏನೂ ಅರ್ಥ ಆಗದೆ ಉತ್ತರ ಕುಮಾರನು ಹೇಳಿದಂತೆ ಮಾಡಿದನು. ಮರದ ಹತ್ತಿರ ಹೋಗಿ ಅದರಲ್ಲಿ ಅಡಗಿದ್ದ ತನ್ನ ಧನಸ್ಸು - ಗಾಂಢೀವಿ ಹಾಗು ತನ್ನ ಶಂಖ - ದೇವದತ್ತ ತಗೊಂಡನು. ಮತ್ತೆ ರಣರಂಗಕ್ಕೆ ಹೋದರು. 

ಅರ್ಜುನ ಗಾಂಢೀವಿಗೆ ತಂತಿ ಕಟ್ಟಿ ಒಮ್ಮೆ ಎಳೆದು ಬಿಟ್ಟನು. ಆ ಶಬ್ದ ಇಡೀ ಕುರು ಸೇನೆಯ ಎದೆಯಲ್ಲಿ ಭೀತಿ ಹುಟ್ಟಿಸಿತು. ಯುದ್ಧ ಪ್ರಾರಂಭ ಮಾಡಲು ದೇವದತ್ತ ಶಂಖ ನಾದ ಮಾಡಿದನು. ಇದು ಅರ್ಜುನನೇ ಇರಬೇಕೆಂದು ಎಲ್ಲರಿಗೂ ಅರ್ಥವಾಯಿತು. 

ಆವತ್ತು ಅರ್ಜುನ, ಒಂದು ಹಸಿದ ಸಿಂಹದಂತೆ ಕುರು ಸೇನೆಯನ್ನು ಧ್ವಂಸ ಮಾಡಿದನು. ಬೇಕಿದ್ದರೆ ಅಂದೇ ದುರ್ಯೋಧನ, ದುಷ್ಶಾಸನರನ್ನು ಕೊಂದಿರುತ್ತಿದ್ದ. ಆದರೆ ಕುರುಕ್ಷೇತ್ರ ಯುದ್ಧದಲ್ಲೇ ಎದುರಿಸಬೇಕು, ದುರ್ಯೋಧನ ದುಶ್ಶಾಸನರನ್ನು ಭೀಮನೇ ಕೊಲ್ಲಬೇಕು ಎಂದು ಕೇವಲ ಅವರನ್ನು ಮೂರ್ಛೆ ತಪ್ಪುವಂತೆ ಮಾಡಿದನು. ಹೀಗೆ ಅರ್ಜುನ ಕುರು ಸೇನೆಯನ್ನು ಸೋಲಿಸಿದ. 

---
೧. ಬೃಹನ್ನಳೆಯೇ ಅರ್ಜುನ ಎಂದು ತಿಳಿಯುವಷ್ಟರಲ್ಲಿ ಅಜ್ಞಾತ ವಾಸದ ವರ್ಷ ಸಮಾಪ್ತಿಯಾಗಿತ್ತು. 
೨. ಪ್ರತಿ ವರ್ಷ ಅದೇ ದಿನ ನಾವು ನವರಾತ್ರಿಯಲ್ಲಿ ಆಯುಧ ಪೂಜೆ ಮಾಡುತ್ತೀವಿ. 
---

ಏನಿರಬಹುದು ನೀತಿ - 

೧. ಭೀಷ್ಮ ಮಾತಾಡುವ ಮುನ್ನ ಯೋಚನೆ ಮಾಡದೆ ತನಗೆ ಗೊತ್ತಿಲ್ಲದಂತೆ ಪಾಂಡವರೆಲ್ಲಿರಬಹುದು ಎಂದು ಹೇಳಿದ. ಮಾತಾಡುವ ಮುನ್ನ ಯೋಚನೆ ಮಾಡಿ ಮಾತಾಡಿದರೆ ಒಳ್ಳೇದು. 
೨. ಎಷ್ಟೋ ವರ್ಷಗಳು ಧನುರ್ವಿದ್ಯೆ ಅಭ್ಯಾಸ ಮಾಡಿದ ಅರ್ಜುನ ೧ ವರ್ಷ ಅಜ್ಞಾತದಲ್ಲಿ ಇದ್ದ ಮಾತ್ರಕ್ಕೆ ಕಲಿತ ವಿದ್ಯೆ ಮರೆಯಲಿಲ್ಲ. ಚೆನ್ನಾಗಿ ಕಲಿತ ವಿದ್ಯೆ ಸುಲಭವಾಗಿ ಮರೆಯುವುದಿಲ್ಲ. 


No comments:

Post a Comment