Thursday, June 25, 2020

Stories for kids - 4 - Duryodhana's weakness

ದುರ್ಯೋಧನನ ದೌರ್ಬಲ್ಯ 

ಕುರುಕ್ಷೇತ್ರ ಯುದ್ಧದ ೧೭ನೇ ದಿನ. ದುರ್ಯೋಧನನ ಎಲ್ಲ ೯೯ ತಮ್ಮಂದಿರನ್ನು ಭೀಮ ಕೊಂದಿದ್ದನು. ಅಂದು ರಾತ್ರಿ ತಾಯಿ ಗಾಂಧಾರಿಯನ್ನು ನೋಡಲು ದುರ್ಯೋಧನ ಹೋದನು. 
'ತಾಯಿ, ನಿನ್ನ ೯೯ಜನ ಮಕ್ಕಳು ವೀರಗತಿ ಹೊಂದಿದ್ದಾರೆ. ನಾನು ಒಂಟಿ ಆದೆ.  ಪಾಂಡವರನ್ನು ಸೋಲಿಸಬೇಕೆಂದರೆ ನೀನೆ ನನಗೆ ಆಶೀರ್ವಾದ ಕೊಡಬೇಕು. ನನಗೆ ಚಿರಂಜೀವಿ ಆಗುವ ವರ ಕೊಡು ತಾಯಿ. ' ಎಂದ ದುರ್ಯೋಧನ. 

೯೯ ಮಕ್ಕಳನ್ನು ಕಳೆದುಕೊಂಡ ನೋವಿನಿಂದ ನರಳುತ್ತಿದ್ದ ಗಾಂಧಾರಿ ಹೇಳಿದಳು 'ಮಗ, ನಾನು ಹೇಳಿದಂತೆಯೇ ಮಾಡು. ಹೋಗು, ಹೋಗಿ ಸ್ನಾನ ಮಾಡಿಕೊಂಡು ಏನೂ ಬಟ್ಟೆ ಇಲ್ಲದೆ ನನ್ನ ಮುಂದೆ ಬಂದು ನಿಲ್ಲು. '

'ಬಟ್ಟೆ ಇಲ್ಲದೆ ಯಾಕೆ ಮಾತೆ ?' ಎಂದ ದುರ್ಯೋಧನ. 

'ನಾನು ಹೇಳಿದಂತೆ ಮಾಡು' ಎಂದಳು ಗಾಂಧಾರಿ ಮಗನ ತಳಹರಟೆಯ ಮಾತಿನಿಂದ ಕೋಪ ಬಂದು. 

ಹುಟ್ಟುಕುರುಡನಾದ ಧ್ರಿತರಾಷ್ಟ್ರನನ್ನು ಮದುವೆಯಾದ ಗಾಂಧಾರಿ ಪತಿಗೆ ಕಾಣದ ಲೋಕ ತಾನು ನೋಡುವುದು ಬೇಡ ಎಂದು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದಳು. ಮದುವೆಯಾದಾಗಲಿಂದ ಒಂದು ಸಾರಿ ಕೂಡ ತೆಗೆದಿರಲಿಲ್ಲ. ಅವಳ ಭಕ್ತಿ ಹಾಗು ತಪಸ್ಸಿನ ಫಲಗಳೆಲ್ಲ ಒಂದೇ ದೃಷ್ಟಿಯಲ್ಲಿ ಸೇರಿಸಿ ದುರ್ಯೋಧನನ ಮಯ್ಯಿ ನೋಡಿದರೆ, ನೋಡಿದ ಅಂಗಗಳೆಲ್ಲ ವಜ್ರದಂತೆ ಆಗುತ್ತೆ. 

ಗಾಂಧಾರಿ ಹೇಳಿದಂತೆ ದುರ್ಯೋಧನ ಸ್ನಾನ ಮಾಡಿಕೊಂಡು ಏನೂ ಬಟ್ಟೆ ಇಲ್ಲದೆ ತಾಯಿಯ ಶಿಭಿರಕ್ಕೆ ಹೋಗುತ್ತಿದ್ದನು. ಇದನ್ನು ಶ್ರೀ ಕೃಷ್ಣನು ನೋಡಿ - 'ಏನಯ್ಯ ದುರ್ಯೋಧನ! ಬಟ್ಟೆ ಯಾಕೆ ಹಾಕಿಲ್ಲ, ಎಲ್ಲಿಗೆ ಹೊರಟಿದ್ಯಾ?'.

ದುರ್ಯೋಧನನಿಗೆ ನಾಚಿಕೆ ಆಗಿ ತಾಯಿ ಗಾಂಧಾರಿಯ ಆದೇಶದಂತೆ ನಡೆದುಕೊಳ್ಳುತ್ತಿದ್ದೀನಿ ಎಂದ. ಅತಿ ತೀಕ್ಷ್ಣ ಬುದ್ಧಿಯುಳ್ಳ ಶ್ರೇ ಕೃಷ್ಣನು ಗಾಂಧಾರಿ ಮಗನನ್ನು ಅಜೇಯನಾಗಿ ಮಾಡುವಳು ಎಂದು ಊಹೆ ಮಾಡಿಕೊಂಡ. 

'ತಾಯಿಯಮುಂದೆ ಬಟ್ಟೆ ಇಲ್ಲದೆ ಹೋಗುವ ವಯಸ್ಸಾ ನಿನ್ನದು?! ಸ್ವಲ್ಪ ಕುರು ವಂಶದ ಘನತೆ ಕಾಪಾಡು. ಕನಿಷ್ಟ ಒಂದು ಬಾಳೆ ಎಳೆಯನ್ನಾದರೂ ಅಂಗವಸ್ತ್ರದ ಹಾಗೆ ಇಟ್ಟುಕೊಂಡು ಹೋಗು.' ಎಂದು ಗೇಲಿ ಮಾಡಿದ ಕೃಷ್ಣ. 

ದುರ್ಯೋಧನನಿಗೆ ಕೃಷ್ಣನ ಮಾತು ಸರಿ ಅನ್ನಿಸಿ ಒಂದು ಬಾಳೆಎಲೆ ಅಂಗವಸ್ತ್ರದಹಾಗೆ ಇಟ್ಟು ಗಾಂಧಾರಿಯ ಶಿಭಿರವನ್ನು ಪ್ರವೇಶಿಸಿ 'ತಾಯಿ, ನೀನು ಹೇಳಿದಹಾಗೆ ಸ್ನಾನ ಮಾಡಿ ಬಟ್ಟೆ ಇಲ್ಲದೆ ಬಂದಿದ್ದೀನಿ, ನೋಡು. ' ಎಂದ. 

ಇದನ್ನು ಕೇಳಿ ಗಾಂಧಾರಿ ತನ್ನ ಕಣ್ಣಿಗೆ ಕಟ್ಟಿದ್ದ ಕಪ್ಪು ಬಟ್ಟೆ ತೆಗೆದು ತನ್ನ ಮಗನನ್ನು ಮೊದಲ ಸಾರಿಗೆ ನೋಡಿದಳು. ಅವಳ ದೃಷ್ಟಿ ಬಿದ್ದ ಎಲ್ಲ ಅಂಗಗಳು ಅವಳ ತಪೋಶಕ್ತಿಯಿಂದ ವಜ್ರದ್ದಾದವು. ಆದರೆ ಅಂಗವಸ್ತ್ರದಂತೆ ಬಾಳೆಎಲೆ ಅಡ್ಡ ಇದ್ದರಿಂದ ದುರ್ಯೋಧನನ ತೊಡೆಗಳ ಮೇಲೆ ತಾಯಿಯ ಧೃಷ್ಟಿ ಬೀಳಲಿಲ್ಲ . 

ಕೋಪದಿಂದ ಗಾಂಧಾರಿ 'ದುರ್ಯೋಧನ, ನಾನು ಹೇಳಿದಂತೆ ನೀನು ಯಾಕೆ ನಡೆದುಕೊಂಡಿಲ್ಲ? ಬಾಳೆ ಎಲೆ ಅಡ್ಡ ಯಾಕೆ ಇಟ್ಟೆ. ನಿನ್ನ ತಾಯಿ ಮುಂದೆ ನಿನಗೆ ಯಾಕೆ ಸಂಕೋಚ? '
'ನನ್ನ ಎಷ್ಟೋ ವರ್ಷಗಳ ತಪೋಶಕ್ತಿ ಸೇರಿಸಿ ನನ್ನ ಧೃಷ್ಟಿ ಬಿದ್ದ ಅಂಗಗಳೆಲ್ಲ ವಜ್ರದ್ದಾಗಿಸಿದೆ. ಆದರೆ ನಿನ್ನ ತೊಡೆ ಮುಂಚಿನಹಾಗೆ ಉಳಿದುಬಿಟ್ಟಿದೆ. ನೀನು ಯಾಕೆ ಹೀಗೆ ಮಾಡಿದೆ?' ಎಂದು ದುಃಖಿಸುತ್ತಾ ಕೇಳಿದಳು. 

ತನ್ನ ತಪ್ಪು ಅರಿವಾಗಿ, ದುರ್ಯೋಧನ - 'ಕ್ಷಮಿಸು ತಾಯಿ, ನೀನು ಹೇಳಿದರೆ ಇನ್ನೊಮ್ಮೆ ಸ್ನಾನ ಮಾಡಿ ಬರ್ತೀನಿ. ಈ ಸಾರಿ ನೀನು ನನ್ನ ಎಲ್ಲ ಅಂಗಗಳನ್ನು ವಜ್ರದ್ದಾಗಿಸು. '

'ಮಗ, ನಾನು ಮಾಯಾವಿ ಅಲ್ಲ. ನಿನಗೆ ಚಿರಂಜೀವಿ ಆಗುವ ವರ ಕೊಡುವುದು ನನ್ನ ಶಕ್ತಿಗೆ ಮೀರಿದ್ದು. ಆದರೆ ಶಿವ ಭಕ್ತೆಯಾದ ನಾನು ನಿನ್ನ ಮಯ್ಯನ್ನು ವಜ್ರದ್ದಾಗಿಸಬಲ್ಲೆ. ನಾನು ನನ್ನ ಇದ್ದ ಎಲ್ಲ ಶಕ್ತಿಯನ್ನು ಆ ಧೃಷ್ಟಿಯಲ್ಲಿ ಉಪಯೋಗಿಸಿಬಿಟ್ಟೆ. ದೊಡ್ಡವರ ಮಾತಿಗೆ ಬೆಲೆ ಕೊಡದೆ ನೀನು ಗೆಲ್ಲುವ ಅವಕಾಶ ಕಳೆದುಕೊಂಡೆ' ಎಂದು ದುಃಖಿಸಿದಳು ಗಾಂಧಾರಿ. 

--
೧೮ನೇ ದಿನ, ಗಧಾ ಯುದ್ಧದಲ್ಲಿ ಭೀಮ ದುರ್ಯೋಧನನ ತೊಡೆ ಮುರಿದು ದುರ್ಯೋಧನನ್ನು ಸಂಹರಿಸಿದ. 
--

ಏನಿರಬಹುದು ನೀತಿ ?
೧. ಬೇರೆಯವರು ಏನು ಅಂದುಕೊಳ್ಳುವರೋ ಅಂತ ದುರ್ಯೋಧನ ತಾಯಿಯ ಮಾತು ಮೀರಿ ಅವಳ ಆಜ್ಞೆ ಉಲ್ಲಂಘಿಸಿದ. ತನ್ನ ಸ್ವಂತ ಬುದ್ಧಿಯಿಂದ ಆಲೋಚಿಸಿದ್ದರೆ ತಾಯಿಯ ಈ ವಿಚಿತ್ರ ಆಜ್ಞೆಯ ಹಿಂದೆ ಉದ್ದೇಶ ಅರ್ಥವಾಗಿರುತ್ತಿತೇನೋ. ಆದ್ದರಿಂದ ಬೇರೆಯವರು ಏನು ಅಂದುಕೊಳ್ಳುವರೋ ಅನ್ನುವುದಕ್ಕಿಂತ ನಾವು ಏನು ಸರಿಯೋ ಅದನ್ನು ಮಾಡಿದರೆ ಒಳ್ಳೇದು. 
೨. ಭೀಷ್ಮ, ದ್ರೋಣ, ಕ್ರಿಪಾ , ವಿದುರರಂಥ ಮಹಾನುಭಾವರ ಮಾತನ್ನು ಕೇಳದ ದುರ್ಯೋಧನ ಅಂದು ತಾಯಿಯ ಮಾತನ್ನು ಕೇಳುವನೇ ? - ಎಂಬ ಪ್ರಶ್ನೆ ಗಾಂಧಾರಿಗೆ ತೋಚಿದ್ದರೆ ಅವಳು ಕೊಟ್ಟ ಆಜ್ಞೆಯ ಹಿಂದಿನ ಕಾರಣ ಬಿಡಿಸಿ ಹೇಳಿರುಬಹುದಿತ್ತು. ಕೆಲವೊಮ್ಮೆ ಬೇರೆಯವರಿಗೆ ನಮ್ಮ ಮಾತಿನ ಅರ್ಥ ತಿಳಿದಿರಲ್ಲ. ಹೆಚ್ಚಿಗೆ ಊಹೆ ಮಾಡಿಕೊಳ್ಳದೆ, ಸರಳ ರೀತಿಯಲ್ಲಿ ಮಾತಾಡುವುದು ಉತ್ತಮ. 

No comments:

Post a Comment